ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮೆರವಣಿಗೆ, ಧ್ವನಿವರ್ಧಕ, ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಗಾಗಿ ಚುನಾವಣಾ ಆಯೋಗ ರೂಪಿಸಿರುವ “ಸುವಿಧಾ” ತಂತ್ರಾಂಶ ಬಳಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಕುರಿತ ದೂರುಗಳನ್ನು ಸ್ವೀಕರಿಸಲು 1950 ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಗುರಿ ಇದೆ. ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಹಾಗೂ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಡಳತಕ್ಕೆ ಅಗತ್ಯ ಸಹಕಾರ ನೀಡಬೇಕು.
ಅಭ್ಯರ್ಥಿಗಳು ವಾಹನ, ಧ್ವನಿವರ್ಧಕ, ಸಭೆ, ಸಮಾರಂಭ, ರ್ಯಾಲಿ ಸೇರಿದಂತೆ ವಿವಿಧ ಅನುಮತಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ “ಸುವಿಧಾ” ತಂತ್ರಾಂಶದಲ್ಲಿ https://suvidha.eci.gov.inನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಲು ಅವಕಾಶವಿದೆ.
ಹೆಲಿಕ್ಯಾಪ್ಟರ್ ಲ್ಯಾಡಿಂಗ್, ಏರ್ ಬಲೋನ್, ವಿಡಿಯೋ ವ್ಯಾನ್‍ಗೆ ಅನುಮತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಂದ ಪಡೆಯಬಹುದಾಗಿದೆ. ರ್ಯಾಲಿ, ಧ್ವನಿವರ್ಧಕ, ಸಭೆ, ಸಮಾರಂಭ, ವಾಹನಗಳ ಬಳಕೆ ಸೇರಿದಂತೆ ಮತ್ತಿತರೆ ಚಟುವಟಿಕೆಗಳಿಗೆ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಅನುಮತಿ ನೀಡುವರು.
ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ಮಾಧ್ಯಮ, ವಾಯ್ಸ್ ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳ ವೆಬ್‍ಸೈಟ್‍ನಲ್ಲಿ ಜಾಹೀರಾತು ಹಾಕಲು ಬಯಸುವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಯಾವುದೇ ಜಾಹೀರಾತುಗಳನ್ನು ಪ್ರಕಟಪಡಿಸುವ ಮುನ್ನ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯಿಂದ ಕಡ್ಡಾಯವಾಗಿ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದ ನಂತರವೇ ಬಿತ್ತರಿಸಬೇಕು. ಇದಕ್ಕಾಗಿ ಆಯಾ ಪಕ್ಷ ಅಥವಾ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಜಿಲ್ಲಾ ಪಂಚಾಯತ್ ಆವರಣದ ಸಂಪನ್ಮೂಲ ಕೇಂದ್ರ ಕಟ್ಟಡ, ಮೊದಲನೆ ಮಹಡಿ, ಇಲ್ಲಿ ಪ್ರಾರಂಭಿಸಲಾಗಿರುವ ಎಂಸಿಎಂಸಿ ವಿಭಾಗದಲ್ಲಿ ಉಚಿತವಾಗಿ ಪಡೆಯಬಹುದು. ಅರ್ಜಿಯೊಂದಿಗೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಪ್ರಕಟಿಸಲು ಉದ್ದೇಶಿಸಿರುವ ಜಾಹೀರಾತಿನ ಪ್ರತಿ, ಸಿ.ಡಿ. ಪೆನ್‍ಡ್ರೈವ್, ಸಿಡಿ ಯಲ್ಲಿ ಇರುವ ಭಾಷಣ ಅಥವಾ ಸಂದೇಶದ ಮುದ್ರಿತ ಪ್ರತಿಯನ್ನು ದೃಢೀಕರಿಸಿ ಎರಡು ಸೆಟ್‍ನೊಂದಿಗೆ ಲಗತ್ತಿಸಿ ಅಭ್ಯರ್ಥಿ ಅಥವಾ ಅಭ್ಯರ್ಥಿಯಿಂದ ಅನುಮತಿ ಪಡೆದ ವ್ಯಕ್ತಿಗಳು ಸಲ್ಲಿಸಿದಲ್ಲಿ, ಅರ್ಜಿಯನ್ನು ಸಮಿತಿಯು ಪರಿಶೀಲಿಸಿ, ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಲಿದೆ. ಎಂಸಿಎಂಸಿ ಸಮಿತಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯದೆ ಯಾವುದೇ ಟಿ.ವಿ., ಕೇಬಲ್, ಇ-ಪೇಪರ್, ವೆಬ್‍ಪೋರ್ಟಲ್, ಯುಟ್ಯೂಬ್, ಫೇಸ್‍ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ವೆಬ್‍ಸೈಟ್‍ನಲ್ಲಿ ಜಾಹೀರಾತು, ಸ್ಕ್ರೋಲ್ ಮೆಸೇಜ್ ಮತ್ತಿತರ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ತಪ್ಪಿದಲ್ಲಿ, ಚುನಾವಣಾ ಆಯೋಗದ ಸೂಚನೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.