ಪಾಟ್ನಾ: ಪಾಟ್ನಾ ಜಿಲ್ಲೆಯ ಬಿಹ್ತಾ ಪಟ್ಟಣದಲ್ಲಿ ಅಕ್ರಮ ಮರಳು ದಂಧೆ ಕಾರ್ಯಾಚರಣೆಗೆ ತೆರಳಿದ್ದ ಗಣಿ ಇಲಾಖೆಯ ಮಹಿಳಾ ಇನ್ಸ್ಪೆಕ್ಟರ್ರೊಬ್ಬರನ್ನು ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ತಿಳಿದುಬಂದಿದೆ.
ಗಣಿ ಇಲಾಖೆಯ ಇನ್ಸ್ಪೆಕ್ಟರ್ ಅಮ್ಯಾ ಕುಮಾರಿ, ಇಲಾಖಾಧಿಕಾರಿ ಕುಮಾರ್ ಗೌರವ್ ಮತ್ತು ನಿರೀಕ್ಷಕ ಸೈಯದ್ ಫರ್ಹೀನ್ ಸೇರಿದಂತೆ ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣಿ ಇಲಾಖೆ ಅಧಿಕಾರಿಗಳ ತಂಡವೊಂದು ಟ್ರಕ್ಗಳ ಓವರ್ಲೋಡ್ ಮತ್ತು ಅಕ್ರಮ ಮರಳುಗಾರಿಕೆಯನ್ನು ಪರಿಶೀಲಿಸಲು ಬಿಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಪರೇವ್ ಗ್ರಾಮಕ್ಕೆ ತೆರಳಿತ್ತು. ಕೈ ಹಿಡಿದು ಎಳೆದಾಡಿ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ 3 ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, 50 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ 44 ಮಂದಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.