ಮಂಡ್ಯ: ಕೆಆರ್‌ಎಸ್ ಆಣೆಕಟ್ಟಿನಲ್ಲಿ ನೀರು ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ಶತಮಾನದ ಹಿಂದೆ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇವಾಲಯ ಐದು ವರ್ಷಗಳ ಬಳಿಕ ಗೋಚರ ಆಗುತ್ತಿದೆ. ಕಾವೇರಿ ಜಲಾಶಯನ ಪ್ರದೇಶದಲ್ಲಿ ಈ ಮುಂಗಾರು ಮಳೆ ಆರಂಭವಾದ ಹಿನ್ನೆಲೆ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಒಂದೆಡೆ ನೀರಿನ ಕೊರತೆ ಎದುರಾಗುವ ಆತಂಕವಿದೆ. ಮತ್ತೊಂದೆಡೆ ಐದು ವರ್ಷಗಳ ಬಳಿಕ ಅಣೆಕಟ್ಟೆಯಲ್ಲಿ ಮುಳುಗಡೆಯಾದ ವೈಶಿಷ್ಟ್ಯಗಳು ಬೆಳಕಿಗೆ ಬರುತ್ತಿವೆ.
ಡ್ಯಾಂನಲ್ಲಿ 110 ಅಡಿಗೂ ಹೆಚ್ಚು ನೀರು ಸಂಗ್ರಹವಾದರೆ ದೇವಾಲಯ ಸಂಪೂರ್ಣ ಮುಳುಗಡೆಯಾಗುತ್ತದೆ. ಈಗ ಡ್ಯಾಂನಲ್ಲಿ 81 ಅಡಿ ನೀರು ಸಂಗ್ರಹವಾಗಿದೆ. ದೇವಾಲಯ ಹಾಗೂ ಶತಮಾನದ ವೀರಗಲ್ಲುಗಳು ಕಾಣಲು ಸಿಗುತ್ತಿವೆ. ಕೆಆರ್‌ಎಸ್ ಹಿನ್ನೀರಿನ ಬೋರೆ ಆನಂದೂರು ಗ್ರಾಮದ ಬಳಿಯ ಹಿನ್ನೀರಿನಲ್ಲಿ ಈ ಪುರಾತನ ಕಾಲದ ದೇವಸ್ಥಾನವಿದೆ. ಡ್ಯಾಂ ನಿರ್ಮಾಣ ಆಗುವುದಕ್ಕೂ ಮುನ್ನ ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆ ಮಾಡಿಸಿದ್ದಾರೆ. ಡ್ಯಾಂ ನಿರ್ಮಾಣದ ಬಳಿಕ ದೇವಾಲಯ ಹಾಗೂ ಹಲವು ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾದವು. ಈಗ ಮೂಲ ವಿಗ್ರಹವನ್ನು ಮಜ್ಜಿಗೆಪುರ ಗ್ರಾಮದ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.