ಹೊಳಲ್ಕೆರೆ: ದೇಶ, ರಾಜ್ಯದಲ್ಲಿ ಜಾತಿ-ಧರ್ಮದ ಹೆಸರಲ್ಲಿ ಜನರನ್ನು ಇಬ್ಭಾಗ ಮಾಡಲಾಗುತ್ತಿದ್ದು, ಬೆಲೆ ಏರಿಕೆ ಮರೆಸುವ ಕೆಲಸ ನಡೆಯುತ್ತಿದೆ ಎಂದು ನಿವೃತ್ತ ನೌಕರ ಸಂಘದ ಹಿರಿಯ ಸದಸ್ಯ ಪಿ.ಈಶ್ವರಪ್ಪ ತಾಳಿಕಟ್ಟೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಿವೃತ್ತ ನೌಕರ ಸಂಘದ ಸದಸ್ಯರ ಜೊತೆ ಮಾಜಿ ಸಚಿವ ಆಂಜನೇಯ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮುಗಿಲುಮುಟ್ಟಿದೆ. ನನಗೆ ನಿಮ್ಮ ಊರಿನಲ್ಲಿ ಕಡಿಮೆ ಮತ ಬಂದಿವೆ ಎಂದು ನಮ್ಮೂರು ತಾಳಿಕಟ್ಟೆಯ ಅಭಿವೃದ್ಧಿಗೆ ಶಾಸಕ ಚಂದ್ರಪ್ಪ ಗಮನಹರಿಸಲಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೂ ಅಡ್ಡಿಪಡಿಸಿದರು. ಇದು ದ್ವೇಷ, ಅಹಂಕಾರದ ಉತ್ತುಂಗ ಎಂದು ಹೇಳಿದರು.
ನಾವು ಸರ್ಕಾರಿ ನೌಕರರಾಗಿದ್ದ ಸಂದರ್ಭ, ನಿವೃತ್ತಗೊಂಡ ಬಳಿಕ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿತ್ತಿದ್ದೇವೆ. ಆದರೆ, ಈಗ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಇಂತಹ ಆತಂಕ ಈ ಹಿಂದೆ ನಾವು ಕಂಡಿಲ್ಲ.ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ನಿವೃತ್ತ ನೌಕರರಿಗೆ ಪಿಂಚಣಿ ವ್ಯವಸ್ಥೆ ಮರುಜಾರಿ ಮಾಡಲಿಲ್ಲ ಎಂದರು.
ಸಿಲಿಂಡರ್ ಬೆಲೆ, ಬೆಳೆಕಾಳು, ಅಡುಗೆ ಎಣ್ಣೆ, ವಿದ್ಯುತ್ ದರ, ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ. ಪಿಂಚಣಿ ನಂಬಿ ಬದುಕುವ ನಾವು ಬೆಲೆ ಏರಿಕೆಗೆ ತತ್ತರಿಸಿದ್ದೇವೆ. ಇನ್ನೂ ಕೂಲಿ ಮಾಡಿ ಬದುಕುವ ಜನರ ಕಷ್ಟ ಹೇಳತೀರದು ಎಂದರು.
ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಗಳನ್ನು ಚಾಚೂ ತಪ್ಪದೇ ಪಾಲಿಸುವ ಪಕ್ಷ. ಎಚ್ ಆಂಜನೇಯ ಜೆಂಟಲ್‍ಮ್ಯಾನ್, ಶಾಸಕ ಎಂ.ಚಂದ್ರಪ್ಪನ ರೀತಿ ದುರ್ವರ್ತನೆ ತೋರುವ ವ್ಯಕ್ತಿಯಲ್ಲ. ಯಾರನ್ನೆ ಮಾತನಾಡಿಸಿದರೂ ಸಹ ಗೌರವದಿಂದ ಕಾಣುವ ರಾಜಕಾರಣಿ. ಆದ್ದರಿಂದ ಈ ಬಾರಿ ನಾವು ಆಂಜನೇಯ ಅವರ ಗೆಲುವು ನಮ್ಮ ಸ್ವಾಭಿಮಾನದ ಪ್ರಶ್ನೆ ಆಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಆಂಜನೇಯ ಅವರು, ಹೊಳಲ್ಕೆರೆ ತಾಲ್ಲೂಕನ್ನು ಮಾದರಿ ರೀತಿ ಅಭಿವೃದ್ಧಿ ಮಾಡಿದ್ದಾರೆ. ಶೈಕ್ಷಣಿಕ ಬೃಹತ್ ಕಟ್ಟಡಗಳು ಅವರ ಅಭಿವೃದ್ಧಿಗೆ ಸಾಕ್ಷಿ ಆಗಿವೆ ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಗಂಗಾತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕರಾದ ಟಿ.ಹೆಚ್.ಕರಿಸಿದ್ದಪ್ಪ, ಜಿ.ರಾಮಚಂದ್ರಪ್ಪ, ಎನ್.ಚಂದ್ರಪ್ಪ, ಗುಮ್ಮಣ್ಣ, ಜಿ.ನಿಂಗಪ್ಪ, ಎನ್.ಚಂದ್ರಪ್ಪ, ಎನ್.ಕೆ.ಬಸವರಾಜಪ್ಪ, ಹೆಚ್.ಕಲ್ಲೇಶಪ್ಪ, ಶಿವಣ್ಣ, ಓಂಕಾರಪ್ಪ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.