ಚಿತ್ರದುರ್ಗ : ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ನಾಲ್ಕೈದು ವರ್ಷಗಳ ಕಾಲ ಕಾದಿದ್ದ ಪರಿಣಾಮ ಈಗ ಸಚಿವನಾಗಿದ್ದೇನೆ. ನಿರಂತರ ಪರಿಶ್ರಮ, ತಾಳ್ಮೆಯಿದ್ದರೆ ಯಾವುದೇ ಕ್ಷೇತ್ರದಲ್ಲಾಗಲಿ ಯಶಸ್ಸು ಗಳಿಸಬಹುದೆಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ ತಿಳಿಸಿದರು.
ಚಿತ್ರದುರ್ಗ ನಾಯಕ ಸಮಾಜದಿಂದ ವಾಲ್ಮೀಕಿ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹೆಚ್ಚಿನ ಅಂಕಗಳನ್ನು ಪಡೆದು ಪ್ರತಿಭಾ ಪುರಸ್ಕಾರಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಇನ್ನು ಹೆಚ್ಚಿದೆ. ನಿಮ್ಮ ತಂದೆ ತಾಯಿಗಳ ಪರಿಶ್ರಮಕ್ಕೆ ಚ್ಯುತಿ ಬಾರದಂತೆ ಮುಂದಿನ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಬೇಕು. ಪ್ರತಿಭಾ ಪುರಸ್ಕಾರದಿಂದ ಬೇರೆಯವರಿಗೆ ಪ್ರೇರೇಪಣೆ ನೀಡಿದಂತಾಗುತ್ತದೆ. ನಾನು ಸಾಮಾನ್ಯ ಕುಟುಂಬದಲ್ಲಿ ಜನಿಸಿದವನು ನನ್ನ ತಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಂಡಲ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿದ್ದರು. 2008 ರಲ್ಲಿ ನನಗೆ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಆಗ ನಾನು ಬೇಸರವಾಗಿ ಬೇರೆ ಪಕ್ಷಕ್ಕೆ ಹೋಗದೆ ಕಾಂಗ್ರೆಸ್ನಲ್ಲೆ ಇದ್ದು, ಪಕ್ಷದ ಕೆಲಸ ಮಾಡಿದ ಫಲವಾಗಿ 2013 ರಲ್ಲಿ ಪಕ್ಷ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತು. ಅಂದಿನಿಂದ ಇಲ್ಲಿಯವರೆಗೂ ಮೂರನೆ ಬಾರಿಗೆ ಶಾಸಕನಾಗಿ ಈಗ ಸಚಿವನಾಗುವ ಅದೃಷ್ಟ ಒಲಿದು ಬಂದಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಟೀಕೆಗಳು ಸಾಯುತ್ತವೆ. ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ನಾಯಕ ಸಮಾಜದವರು ನನ್ನ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತೋಟಗಾರಿಕೆ ಇಲಾಖೆಗೆ ಸೇರಿದ ಏಳು ಎಕರೆ ಜಾಗವನ್ನು ತೆಗೆದುಕೊಂಡಿದ್ದೇವೆ. ಅಲ್ಲಿ ಡಿಸಿ. ಕಚೇರಿ ಆಗಬೇಕು. ನಾಮಕಲ್ ಗ್ಯಾರೇಜ್ನಿಂದ ಕೋಟೆಗೆ ಹೋಗಲು ರಸ್ತೆಯಾಗಬೇಕು. ರಸ್ತೆ ಅಗಲೀಕರಣದ ಕಡೆಗೂ ಗಮನ ಕೊಡುತ್ತೇನೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಶೋಧನಾ ಕೇಂದ್ರಕ್ಕೆ ನೂರು ಎಕರೆ ಜಾಗಕ್ಕೆ ಪ್ರಯತ್ನಿಸುತ್ತಿದ್ದೇವೆಂದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ನಾನು ಸಮಾಜ ಕಲ್ಯಾಣ ಮಂತ್ರಿಯಾಗಿದ್ದು, ಸುವರ್ಣ ಯುಗ. ಅಕ್ಷರ ವಂಚಿತ ಸಮುದಾಯದಿಂದ ಬಂದವನು. ಚಿತ್ರದುರ್ಗದ ಅನೇಕ ಕಡೆ ಅವೈಜ್ಞಾನಿಕವಾಗಿ ಡಿವೈಡರ್ಗಳ ನಿರ್ಮಾಣವಾಗಿದೆ. ನನ್ನ ಅಧಿಕಾರವಧಿಯಲ್ಲಿ ರಸ್ತೆ ಅಗಲೀಕರಣಕ್ಕೆ 20 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೆ. ನಂತರ ಬಂದ ಬೇರೆಯವರು ಇಂತಹ ಕೆಲಸ ಮಾಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಡ್ಡಗಳ ನಾಶವಾಗುತ್ತಿರುವುದನ್ನು ತಡೆಯಬೇಕು. ಗಣಿಗಾರಿಕೆಯಲ್ಲಿ ಕೋಟ್ಯಾಂತರ ರೂ.ಗಳ ಅಕ್ರಮವಾಗಿದೆ. ನಗರಸಭೆಗೆ ಸೇರಿದ್ದ ಜಾಗವನ್ನು ನಾಲ್ಕು ಕೋಟಿ ರೂ.ಗೆ ಖರೀಧಿಸಿ ವಾಲ್ಮೀಕಿ ಭವನ ನಿರ್ಮಿಸಲು ಹತ್ತು ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಭವನದಲ್ಲಿನ ಕೆಲವು ಲೋಪಗಳನ್ನು ಸರಿಪಡಿಸಿ ಎಸಿ. ಅಳವಡಿಸಿ ಚೇರ್ಗಳನ್ನು ತೆಗೆಸಿ ಸೌಕರ್ಯ ಕಲ್ಪಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಭದ್ರಾ ಯೋಜನೆಯಿಂದ ಗೋನೂರು ಕೆರೆಗೆ ನೀರು ಹರಿಯುವ ಕಾಲ ಸನಿಹದಲ್ಲಿದೆ. ನವೆಂಬರ್ನಲ್ಲಿ ದುರ್ಗೋತ್ಸವ ಆಚರಣೆಗೆ ಬೇಡಿಕೆಯಿಟ್ಟಿದ್ದೀರ. ಎಲ್ಲಾ ಜಾತಿಯಲ್ಲಿರುವ ಬಡವರಿಗೆ ಅನುಕೂಲವಾಗಬೇಕೆಂದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡುತ್ತ ಕೋಟೆ ಅಭಿವೃದ್ದಿಗೆ 26 ಕೋಟಿ ರೂ.ಗಳ ಮಂಜೂರಾತಿಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ಮುಂದಿನ ತಿಂಗಳು ಟೆಂಡರ್ ಕರೆಯಲಾಗುವುದು. ನಾಮಕಲ್ ಗ್ಯಾರೇಜ್ನಿಂದ ಕೋಟೆಗೆ ರಸ್ತೆ ಕಲ್ಪಿಸಲಾಗುವುದು. ಕೆಂಪೆಗೌಡ, ಸಂಗೊಳ್ಳಿರಾಯಣ್ಣ ಪ್ರಾಧಿಕಾರದಂತೆ ರಾಜವೀರ ಮದಕರಿನಾಯಕ
ಪ್ರಾಧಿಕಾರ ರಚನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.
ನಿಮ್ಮ ಪ್ರತಿಭೆಯ ಹಿಂದೆ ತಂದೆ ತಾಯಿಗಳ ಪರಿಶ್ರಮ, ತ್ಯಾಗವಿದೆ ಎನ್ನುವುದನ್ನು ಮರೆಯಬೇಡಿ. ನೀವುಗಳು ಕಲಿಯುವ ವಿದ್ಯೆ ಸಮಾಜಕ್ಕೆ ಅನುಕೂಲವಾಗಬೇಕೆಂದು ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜು ಮಾತನಾಡಿ ವಾಲ್ಮೀಕಿ ಭವನಕ್ಕೆ ಅಮೃತ ಆಯುರ್ವೇದಿಕ್ ಕಾಲೇಜು ಬಳಿ ನಾಲ್ಕು ಎಕರೆ ಜಾಗ ಮಂಜೂರಾಗಿತ್ತು. ಅಲ್ಲಿ ನ್ಯಾಯಾಧೀಶರುಗಳ ವಸತಿ ಗೃಹವಾಗುತ್ತದೆಂದು ಅಲ್ಲಿ ಅವಕಾಶವಾಗಲಿಲ್ಲ. ಕೊನೆಗೆ ನಗರಸಭೆಯ ಜಾಗದಲ್ಲಿ ಹತ್ತು ಕೋಟಿ ರೂ.ಗಳ ವೆಚ್ಚದಲ್ಲಿ ವಾಲ್ಮೀಕಿ ಭವನವಾಗಿರುವುದು ನಮ್ಮ ಪುಣ್ಯ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹೆಚ್.ಆಂಜನೇಯರವರ ಶ್ರಮವಿದೆ. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀರಂಗಯ್ಯನವರು ಯಾವುದೇ ಅಡೆತಡೆಯಿಲ್ಲದೆ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಹರಿಸಿದರೆಂದು ಸ್ಮರಿಸಿಕೊಂಡರು.
ಹೊರಗೆ ನೋಡಲು ವಾಲ್ಮೀಕಿ ಭವನ ಸುಂದರವಾಗಿದೆ. ಮಳೆ ಬಂದರೆ ಒಳಗೆ ಸೋರುತ್ತದೆ. ಕಳಪೆ ಕಾಮಗಾರಿಯಾಗಿದೆ. ಮಾಜಿ ಶಾಸಕರಿಂದ ಯಾವ ಕೆಲಸವು ಆಗಿಲ್ಲ. ಚಿತ್ರದುರ್ಗ ಪ್ರವಾಸಿ ಕೇಂದ್ರವಾಗಬೇಕು. ದುರ್ಗೋತ್ಸವ ಆಚರಣೆಯಾಗಲಿ. ಮುಖ್ಯವಾಗಿ ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಬೇಡಿಕೆಯಿಟ್ಟರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ಜಾತಿ ವ್ಯವಸ್ಥೆಯಿಂದ ಕೂಡಿರುವ ದೇಶ ನಮ್ಮದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳು ಕಳೆದಿದ್ದರೂ ಇನ್ನು ಜಾತಿಯಿಂದ ನೋಡುವ ಕೆಟ್ಟ ಪದ್ದತಿ ನಿಂತಿಲ್ಲ. ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರನ್ನು ಸಮನಾಗಿ ಕಾಣುವ ಸಮ ಸಮಾಜ ನಿರ್ಮಾಣವಾಗಬೇಕಿದೆ. ನಮ್ಮ ಸಮಾಜಕ್ಕೆ ಪುರಸ್ಕಾರಕ್ಕಿಂತ ತಿರಸ್ಕಾರವೇ ಹೆಚ್ಚು. ನಮ್ಮ ಸಮಾಜದವರಾದ ಜಿಲ್ಲಾ ಉಸ್ತುವಾರಿ ಸಚಿವ
ಟಿ.ರಘುಮೂರ್ತಿರವರಿಗೆ ಸನ್ಮಾನಿಸುತ್ತಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ, ರಾಜು ಬೇತೂರು ಪಾಳ್ಯ, ಪರಮೇಶ್ವರಪ್ಪ, ಮಂಜುನಾಥ್ ಹಾಗೂ ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ, ಬಿ.ಇಡಿ, ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ನಾಯಕ ಸಮಾಜದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರಾಚಾರ್ಯರಾದ ಗುಡ್ಡದೇಶ್ವರಪ್ಪ, ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಸಂದೀಪ್, ಅಹೋಬಲ ಶೋರೂಂನ ಅರುಣ್ಕುಮಾರ್, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ, ಅಹೋಬಲಪತಿ, ದರ್ಶನ್ ಇಂಗಳದಾಳ್, ಕಾಟಿಹಳ್ಳಿ ಕರಿಯಪ್ಪ, ದಿನೇಶ್ಗೌಡಗೆರೆ, ಎ.ಟಿ.ಎಸ್.ತಿಪ್ಪೇಸ್ವಾಮಿ, ನಾಗರಾಜ್, ರತ್ನಮ್ಮ, ಹೆಚ್.ಅಂಜಿನಪ್ಪ, ನಗರಸಭೆ ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ದೀಪು, ಸಿ.ಟಿ.ರಾಜೇಶ್ ಸೇರಿದಂತೆ ನಾಯಕ ಸಮಾಜದ ಅನೇಕ ಪ್ರಮುಖರು ವೇದಿಕೆಯಲ್ಲಿದ್ದರು.
ಚಿತ್ರದುರ್ಗದಲ್ಲಿ ನಾಯಕ ಸಮಾಜಕ್ಕೆ ಪ್ರತ್ಯೇಕವಾದ ನಿವೇಶನವಾಗಲಿ, ಕಟ್ಟಡವಾಗಲಿ ಇಲ್ಲದಿರುವುದರಿಂದ ನಗರ ವ್ಯಾಪ್ತಿಯಲ್ಲಿ ಐದು ಎಕರೆ ಜಾಗ ಮಂಜೂರು ಮಾಡಬೇಕು.
ವಾಲ್ಮೀಕಿ ಭವನ ಕಾಮಗಾರಿ ಕಳಪೆಯಾಗಿರುವುದರಿಂದ ದುರಸ್ಥಿ ಕಾರ್ಯಕ್ಕೆ ತುರ್ತಾಗಿ ಅನುದಾನ ಮಂಜೂರು ಮಾಡಬೇಕು.
ನಿರ್ಮಾಣ ಹಂತದಲ್ಲಿರುವ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ, ಹೈಟೆಕ್ ಬಸ್ ನಿಲ್ದಾಣಕ್ಕೆ ಭೀಮಪ್ಪ ನಾಯಕರ ಹೆಸರು ನಾಮಕರಣವಾಗಬೇಕು. ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ಹೋಗಲು ಪ್ರವಾಸಿಗರಿಗೆ ಸೂಕ್ತ ರಸ್ತೆ ಸಂಪರ್ಕವಾಗಬೇಕೆಂಬ ಬೇಡಿಕೆಯುಳ್ಳ ಮನವಿಯನ್ನು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿರವರಿಗೆ ಅರ್ಪಿಸಿದರು.