ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ಶಾಕ್, ಅಕ್ರಮ ಗಣಿಗಾರಿಕೆ ಮತ್ತು ರಫ್ತು ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವಿಶೇಷ ನ್ಯಾಯಾಲಯ ಆದೇಶಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ಪ್ರೀತ್ ಅವರು ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರೆಡ್ಡಿ ಮತ್ತು ಇತರ 15 ಜನರಿಗೆ ಸಮನ್ಸ್ ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.
ಕೆಲವು ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡದ (ಎಸ್ಐಟಿ) ಹಿರಿಯ ಅಧಿಕಾರಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ. ಖಾಸಗಿ ದೂರನ್ನು ಏಪ್ರಿಲ್ 10, 2023 ರಂದು ದಾಖಲಿಸಲಾಗಿದೆ.
ರೆಡ್ಡಿ ಆಪ್ತ ಮೆಹಫೂಜ್ ಅಲಿ ಖಾನ್, ಮಾಜಿ ಶಾಸಕ ಬಿ.ನಾಗೇಂದ್ರ ಮತ್ತು ದೇವಿ ಎಂಟರ್ಪ್ರೈಸಸ್ ಕಂಪನಿ, ಮಧುಶ್ರೀ ಎಂಟರ್ಪ್ರೈಸಸ್, ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್, ಟ್ರೆಡೆಂಟ್ ಮಿನರಲ್ಸ್ ಮತ್ತು ಟ್ರೆಡೆಂಟ್ ಮೈನಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಇತರ ಆರೋಪಿಗಳಾಗಿದ್ದಾರೆ.
ಜನವರಿ 2008 ಮತ್ತು ಏಪ್ರಿಲ್ 2011 ರ ನಡುವೆ ಆರೋಪಿಗಳು ಸುಳ್ಳು ಇನ್ವಾಯ್ಸ್ ಮತ್ತು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಸೇರಿದ 13.43 ಲಕ್ಷ ಟನ್ ಕಬ್ಬಿಣದ ಅದಿರನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.