ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದು, ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿದ್ದಾರೆ. ಇಂದು ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿ ಹುಲಿ ಯೋಜನೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಇಂದು ಹುಲಿ ರಕ್ಷಿತಾರಣ್ಯಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 7 ಗಂಟೆಗೆ ಬಂಡೀಪುರಕ್ಕೆ ಆಗಮಿಸಲಿದ್ದು, 7.20 ಗಂಟೆಗೆ ಬಂಡೀಪುರದಲ್ಲಿ 15 ಕಿ.ಮೀ. ಹುಲಿ ಸಫಾರಿ ನಡೆಸಿ, ಬಳಿಕ ಅರಣ್ಯ ಸಿಬ್ಬಂದಿ ಜೊತೆಗೆ ಸಂವಾದ ನಡೆಸಲಿದ್ದಾರೆ. ನಂತರ 9.30 ಗಂಟೆಗೆ ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡಿನ ಆನೆಕ್ಯಾಂಪ್ ಗೆ ತೆರಳಿ ಅನಾಥ ಆನೆ ಮರಿಗಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಆಸ್ಕರ್ ಪ್ರಶಸ್ತಿ ವಿಜೇತ ಎಲಿಫಂಟ್ ವಿಸ್ಟರರ್ಸ್ ಸಿನಿಮಾದ ನಿಜಪಾತ್ರಧಾರಿ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ.
ಬಳಿಕ 11 ಗಂಟೆಗೆ ಮೈಸೂರಿನಲ್ಲಿ ನಡೆಯಲಿರುವ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, 2022 ರ ಹುಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಲಿದ್ದಾರೆ. 12. 40 ಕ್ಕೆ ಮೈಸೂರಿನಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.