ಪ್ರತಿಷ್ಠಿತ ಶಾಲೆಗಳಿಗೆ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ: 2023-24ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಇಲಾಖಾ ವತಿಯಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು 6ನೇ ತರಗತಿಗಾಗಿ ದಾಖಲಾತಿ ಮಾಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ನೀಡಲು ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇದೇ ಮೇ 25 ಕೊನೆಯ ದಿನವಾಗಿದೆ.
ಅರ್ಹ ವಿದ್ಯಾರ್ಥಿಗಳು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಚಿತ್ರದುರ್ಗ ಅವರಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಚಿತ್ರದುರ್ಗ ಇಲ್ಲಿಗೆ ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ಮೇ.25 ಸಂಜೆ 5 ಗಂಟೆ ಆಗಿರುತ್ತದೆ. ಅಪೂರ್ಣಗೊಂಡ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಷರತ್ತುಗಳು: 2023-24ನೇ ಸಾಲಿಗೆ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಉಚಿತ ಅರ್ಹತಾ ಪರೀಕ್ಷಾ ಮೂಲಕ ಆಯ್ಕೆ ಮಾಡಲಾಗುವುದು. 5ನೇ ತರಗತಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ದಾಖಲು ಮಾಡಲಾಗುವುದು. 6ನೇ ತರಗತಿಗೆ ಮಾತ್ರ ಜಿಲ್ಲೆಗೆ ನಿಗಧಿ ಪಡಿಸಿರುವ ಗುರಿಗೆ ಅನುಗುಣವಾಗಿ ಪ್ರವೇಶ ಅವಕಾಶವನ್ನು ನೀಡಲಾಗುವುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದು, ಕುಟುಂಬದ ವಾರ್ಷಿಕ ವರಮಾನ ರೂ.2.00 ಲಕ್ಷಗಳ ಮಿತಿಯೊಳಗೆ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಧೃಡೀಕೃತ ಅಂಕಪಟ್ಟಿಯನ್ನು ಅರ್ಜಿ ಜೊತೆಗೆ ಕಡ್ಡಾಯವಾಗಿ ಸಲ್ಲಿಸುವುದು. ವಿದ್ಯಾರ್ಥಿಗಳ ಶುಲ್ಕ ಮತ್ತು ನಿರ್ವಹಣಾ ವೆಚ್ಚವನ್ನು ಸರ್ಕಾರ, ಪ್ರವೇಶ ಪಡೆದ ಶಾಲೆಯು ನಿಗಧಿ ಪಡಿಸಿದ ದರದಲ್ಲಿ ನೀಡಲಾಗುವುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.