ಹಿರೇಕೋಗಲೂರು : ಶಾಸಕ ಶಾಮನೂರು ಶಿವಶಂಕರಪ್ಪಗೆ ವಯಸ್ಸು 92 ಆಗಿರಬಹುದು ಆದರೆ ಉತ್ಸಾಹ ಕುಂದಿಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ ಹೇಳಿದರು.
ಕುಕ್ಕುವಾಡದ ಸಕ್ಕರೆ ಕಾರ್ಖಾನೆಯಲ್ಲಿ ಸ್ವಸಹಾಯ ಸಂಘಗಳ ಬಹಿರಂಗ ಸಭೆಯಲ್ಲಿ ಮಹಿಳೆಯರ ಸಮಸ್ಯೆ ಆಲಿಸಿ ನಂತರ ಮಾತನಾಡಿ, ಎಲ್ಲರೂ ಶಾಮನೂರು ಶಿವಶಂಕರಪ್ಪಗೆ ವಯಸ್ಸಾಗಿದೆ ಎನ್ನುತ್ತಾರೆ. ಆದರೆ ಅವರು ಈಗಲೂ ಬೆಳಗ್ಗೆ ಎದ್ದು ಮತ ಪ್ರಚಾರಕ್ಕೆ ಹೋಗುತ್ತಾರೆ. ಈಗಾಗಲೇ 25 ವರ್ಷ ಆಡಳಿತ ನಡೆಸಿದ್ದಾರೆ. ಇದು ಅವರಿಗೆ 6 ನೇ ಚುನಾವಣೆಯಾಗಿದ್ದು, ಜನರ ಬಳಿ ಹೋಗುತ್ತಾರೆ. ಅವರನ್ನು ಗೆಲ್ಲಿಸಲು ಇಡೀ ಕುಟುಂಬ ಓಡಾಟ ನಡೆಸಿದೆ. ಬಿಜೆಪಿ ಸರಕಾರ ಇದ್ದಾಗ ದಾವಣಗೆರೆ ಜನರಿಗೆ ವ್ಯಾಕ್ಸಿನ್ ನೀಡಲಿಲ್ಲ. ಈ ಸಂದರ್ಭದಲ್ಲಿ 6 ಕೋಟಿ ವೌಲ್ಯದ ವ್ಯಾಕ್ಸಿನ್ ನನ್ನು ಜನರಿಗೆ ಉಚಿತವಾಗಿ ನೀಡಿ ಜನರ ಜೀವ ಉಳಿಸಿದರು ಎಂದರು.
ಈಗಾಗಲೇ ಬಿಜೆಪಿ ಸರಕಾರ ನಮ್ಮ ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡಲು ಹೊರಟಿದೆ. ನಮ್ಮ ರೈತರ ಶ್ರಮ ನಂದಿನಿ ಹಾಲಿನಲ್ಲಿದೆ. ಈಗಾಗಲೇ ಬ್ಯಾಂಕ್‌ನ್ನು ವಿಲೀನಗೊಳಿಸಿದ್ದ ಕಾರಣ ಸಾಕಷ್ಟು ಜನರು ನಿರುದ್ಯೋಗಿಗಳು ಆಗಿದ್ದಾರೆ. ಬರೋಡ ಬ್ಯಾಂಕ್‌ನ್ನು ರಾಜ್ಯಕ್ಕೆ ತರುವ ಮೂಲಕ ಮೊದಲ ಭಾಗವಾಗಿ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ದರಿಂದ ಅಭಿವೃದ್ಧಿಗೆ ಮತ ನೀಡಿ ಎಂದು ಹೇಳಿದರು.