ನವದೆಹಲಿ : ಮೇ 6ರ ಸುಮಾರಿಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ರೂಪುಗೊಳ್ಳುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳಲ್ಲಿ ಒಡಿಶಾ ಮತ್ತು ಬಂಗಾಳ ನಡುವೆ ಹವಾಮಾನ ಬದಲಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.
ಮೂರ್ನಾಲ್ಕು ದಿನಗಳಲ್ಲಿ, ಅಂದರೆ ಮೇ 6ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪರಿಣಾಮ ಕರ್ನಾಟಕದಲ್ಲಿ ಮೇ 7ರ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಮೇ 7 ರವರೆಗೆ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದು ವರ್ಷದ ಮೊದಲ ಸೈಕ್ಲೋನ್ ಆಗಿರುತ್ತದೆ, ಇದರ ಪರಿಣಾಮವು ಮೇ ಎರಡನೇ ವಾರದಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಇದು ತುಂಬಾ ಶಕ್ತಿಯುತವಾಗಿರುತ್ತದೆ. ಕೆಂಪು ಸಮುದ್ರದ ಕರಾವಳಿ ಬಂದರನ್ನ ಆಧರಿಸಿದ ಈ ಚಂಡಮಾರುತಕ್ಕೆ ಯೆಮೆನ್ ಎಂದು ಹೆಸರಿಸಲಾಗಿದೆ. ಈ ಚಂಡಮಾರುತದ ಪರಿಣಾಮವನ್ನ ಪೂರ್ವ ಭಾರತದಿಂದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ನಲ್ಲಿ ಸಹ ನೋಡಬಹುದು ಎಂದು ಹೇಳಲಾಗುತ್ತಿದೆ.