Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಿರ್ಲಕ್ಷಿಸಿದರೆ ಕಠಿಣ ಕ್ರಮ: ದಿವ್ಯಪ್ರಭು ಜಿಆರ್‌ಜೆ

0

 

 

ಚಿತ್ರದುರ್ಗ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಸರಿಯಾಗಿ ತಪಾಸಣೆ ಮಾಡದೆ ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಅವರು ಎಚ್ಚರಿಕೆ ನೀಡಿದರು.

ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಭೆ ನಡೆಸಿದ ಅವರು, ಎಸ್ಎಸ್‌ಟಿ, ಎಫ್‌ಎಸ್‌ಟಿ ತಂಡಗಳು ಸರಿಯಾಗಿ ಕೆಲಸ ಮಾಡಬೇಕು. ಇದಕ್ಕಾಗಿಯೇ ಎಲ್ಲಾ ಅಧಿಕಾರಿಗಳಿಗೆ ವಾಹನ ಮತ್ತು ಇತರ ಸೌಲಭ್ಯಗಳನ್ನು ಕೊಡಲಾಗಿದೆ. ಅಧಿಕಾರಿಗಳು ಕರ್ತವ್ಯ ನಿರ್ಲಕ್ಷಿಸಿರುವುದು ಕಂಡುಬಂದರೆ ಕೂಡಲೇ ಅಮಾನತ್ತು ಮಾಡಿ, ಮುಂದಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು. ನಿಮ್ಮ ನಿರ್ಲಕ್ಷ್ಯದಿಂದ ಜಿಲ್ಲೆಗೆ ಕೆಟ್ಟ ಹೆಸರು ಬರಬಾರದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ 80ಕ್ಕಿಂತ ಹೆಚ್ಚಿನ ವಯೋ ವೃದ್ಧರು ಮತ್ತು ವಿಕಲಚೇತನರ ಮನೆಗಳಿಗೆ ಹೋಗಿ ಮತದಾನ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಇದೇ ಏಪ್ರಿಲ್ 29 ರಿಂದ ಮೇ 6ರ ಒಳಗಾಗಿ ಮಾಡಬೇಕು. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಅತ್ಯಂತ ಜಾಗೃತೆಯಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾಡಬೇಕು ಎಂದು ಹೇಳಿದರು.

ಮನೆಗಳಿಗೆ ತೆರಳಿ ಮತದಾನ ಮಾಡಿಸುವ ಪ್ರಕ್ರಿಯೆಯಲ್ಲಿ ಗುರುತಿಸಲಾಗಿರುವ‌ ಮತದಾರರ ಪೈಕಿ ಶೇ.100 ರಷ್ಟು ಮತದಾನವಾದರೆ ಯಾವುದೇ ದೂರು ಹಾಗೂ ಆಕ್ಷೇಪಣೆಗೆ ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಮಾರ್ಗದರ್ಶನಗಳನ್ನೂ ಪಾಲಿಸಬೇಕು ಎಂದರು.

ಭದ್ರತಾ ದೃಷ್ಟಿಯಿಂದ ಜಿಲ್ಲೆಗೆ ಒದಗಿಸಲಾಗಿರುವ ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ವಿಧಾನಸಭಾ ಕ್ಷೇತ್ರವಾರು ನಿಯೋಜಿಸಲು ವಲ್ನರೆಬಲ್ (Vulnerable) ಮತಗಟ್ಟೆ ಕ್ಲಸ್ಟರ್‌ಗಳು, ಕ್ರಿಟಿಕಲ್ ಮತಗಟ್ಟೆ ಕ್ಲಸ್ಟರ್‌, ಮುಂತಾದವುಗಳ ವಿವರವನ್ನು ಬೇಗ ಅಂತಿಮಗೊಳಿಸಿ ವರದಿ ನೀಡುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಗಾಯತ್ರಿ, ಜಿಲ್ಲೆಯ ಆರು  ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave A Reply

Your email address will not be published.