ಬೆಂಗಳೂರು: ಪಕ್ಷ ಘೋಷಿಸಿರುವ ಐದು ಗ್ಯಾರಂಟಿಗಳಿಗೆ ಷರತ್ತುಗಳು ಇರಲಿವೆ’ ಎಂದು ಕಾಂಗ್ರೆಸ್ ಶಾಸಕ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಎಲ್ಲ ಐದೂ ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದರು.
ಆಯಾ ಇಲಾಖೆಗಳ ಹೊಣೆ ವಹಿಸಲಿರುವ ಸಚಿವರು ಈ ಗ್ಯಾರಂಟಿಗಳ ಜಾರಿಗೂ ಮೊದಲು ಪ್ರಾಯೋಗಿಕವಾಗಿ ಕೆಲಸ ಮಾಡಲಿದ್ದಾರೆ. ಗ್ಯಾರಂಟಿಗಳಿಗೆ ಮಾನದಂಡಗಳು ಇರಲಿವೆ’ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಡುವುದು ಹಿಂದಿನಿಂದಲೂ ಇರುವ ಪದ್ಧತಿ. ಈ ಬಾರಿ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಿದ್ದೆವು. ಈಗ ಅಧಿಕಾರ ಬಂದಿದೆ. ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.