ಹೊಳಲ್ಕೆರೆ : ಮತ ಹಾಕಿದವರು ಏನೆಂದು ಕೊಂಡಾರೆಂದು ಮನುಷ್ಯತ್ವವಿಟ್ಟುಕೊಂಡು ಐದು ವರ್ಷಗಳಿಂದಲೂ ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಶ್ರಮಿಸಿದ್ದೇನೆ. ಜಾತಿ ಜಾತಿಗಳ ನಡುವೆ ಘರ್ಷಣೆ ಹಚ್ಚಿಲ್ಲ. ಎಲ್ಲಿಯೂ ಜಾತಿ ನಿಂದನೆ ಕೇಸು ದಾಖಲಾಗಲು ಬಿಟ್ಟಿಲ್ಲ.
ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಅದಕ್ಕೂ ಮುಂಚೆ ಯಾರು ಯೋಗ್ಯರು ಎನ್ನುವುದನ್ನು ಆಲೋಚಿಸಿ ಈ ಬಾರಿಯ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಅತ್ಯಧಿಕ ಬಹುಮತಗಳಿಂದ ಗೆಲ್ಲಿಸಿ ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಸಾಪುರ, ಆರ್.ನುಲೇನೂರು, ರಂಗಾಪುರ, ಆರ್.ಡಿ.ಕಾವಲ್, ಕೆಂಚಾಪುರ, ಕಣಿವೆಹಳ್ಳಿ, ಸಿಂಗೇನಹಳ್ಳಿ, ತುಪ್ಪದಹಳ್ಳಿ, ದೇವರಹೊಸಹಳ್ಳಿ, ತಾಳಿಕಟ್ಟೆ ಗ್ರಾಮಗಳಲ್ಲಿ ಭಾನುವಾರ ಬಿರುಸಿನ ಮತಯಾಚಿಸಿ ಮಾತನಾಡಿದರು.
ಸಿಂಗೇನಹಳ್ಳಿಯಿಂದ ತಾಳಿಕಟ್ಟೆವರೆಗೆ ರಸ್ತೆಗೆ ಹದಿನೈದು ಕೋಟಿ ರೂ.ಗಳನ್ನು ನೀಡಿದ್ದೇನೆ. ಶಾಶ್ವತವಾಗಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು. ರೈತರಿಗೆ ದಿನಕ್ಕೆ ಐದಾರು ಗಂಟೆಗಳ ಕಾಲ ವಿದ್ಯುತ್, ಕುಡಿಯುವ ನೀರು ಒದಗಿಸಿದ್ದೇನೆ. ಶಾಲಾ-ಕಾಲೇಜು, ಆಸ್ಪತ್ರೆ ನಿರ್ಮಾಣವಾಗಿದೆ. ತಾಲ್ಲೂಕಿನಾದ್ಯಂತ 493 ಹಳ್ಳಿಗಳಲ್ಲಿಯೂ ಇಂತಹ ಕೆಲಸ ಮಾಡಿಲ್ಲ ಅಂತ ಇಲ್ಲ. ತಾಯಂದಿರು ಬೀದಿಯಲ್ಲಿ ಕೊಡಗಳನ್ನಿಟ್ಟುಕೊಂಡು ನೀರಿಗಾಗಿ ಕಾಯುತ್ತಿದ್ದುದನ್ನು ನೋಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೇರವಾಗಿ ನೀರು ತಂದು ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಕೊಡುವುದಕ್ಕಾಗಿ ಐದು ನೂರ ಹತ್ತು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ. ರೈತರಿಗೆ ವಿದ್ಯುತ್ ಸಮಸ್ಯೆ ಕಾಡಬಾರದೆಂದು ಬೆಂಕಿಕೆರೆ, ಮಧುರೆ, ಪಂಡರಹಳ್ಳಿಯಿಂದ ಒಂದೊಂದು ದೊಡ್ಡ ಹೈಟೆನ್ಷ್ನ್ ಲೈನ್ ತಂದು ಕರೆಂಟ್ ಕೊಟ್ಟಿದ್ದೇನೆ. ಅಧಿಕಾರ ಇದ್ದಂತ ಸಂದರ್ಭದಲ್ಲಿ ಸಾರ್ವಜನಿಕರ ಮಧ್ಯೆ ಇದ್ದುಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಐವತ್ತು ಸಾವಿರ ಮತಗಳ ಅಂತರದಿಂದ ಈ ಬಾರಿ ಗೆಲ್ಲುತ್ತೇನೆ. ರಾಜಕಾರಣಿಯಾದವನಿಗೆ ಎಲ್ಲೆಲ್ಲೆ ಏನೇನು ಕೆಲಸ ಆಗಬೇಕು ಎಂದು ಹುಡುಕಿ ಹುಡುಕಿ ಮಾಡಬೇಕು. ಚುನಾವಣೆಯಲ್ಲಿ ಗೆದ್ದೆ ಮಂತ್ರಿಯಾಗಿ ಹೋದೆ ಅಂತ ಅಲ್ಲ. ಮತದಾರರು ಏನೆಂದುಕೊಂಡರು ಎನ್ನುವ ಭಯವಿರಬೇಕೆಂದು ಎದುರಾಳಿ ಕಾಂಗ್ರೆಸ್ನ ಹೆಚ್.ಆಂಜನೇಯನಿಗೆ ಕುಟುಕಿದರು.
ಬ್ರಿಟೀಷರ ಕಾಲ ಹಳೆ ಹೆಂಚಿನ ಮನೆಯಲ್ಲಿದ್ದ ಶಾಲೆಯನ್ನು ಕೆಡವಿ ಗುಣಮಟ್ಟದ ಶಾಲೆ ಕಟ್ಟಸಿದ್ದೇನೆ. ನಾಲ್ಕು ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ರಾಜಕಾರಣಿಯಾದವನಿಗೆ ಉಪಕಾರ ಮಾಡುವ ಗುಣವಿರಬೇಕು. ತಾಲ್ಲೂಕಿನಾದ್ಯಂತ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಿದ್ದೇನೆ. ದಿಕ್ಕುತಪ್ಪಿಸುವ ಕೆಲಸ ಮಾಡುವವರಿದ್ದಾರೆ. ಅಂತಹವರ ವಿರುದ್ದ ಜಾಗೃತರಾಗಿರಿ. ಮುಂದಿನ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಆಂಗ್ಲ ಮಾಧ್ಯಮ ಶಾಲೆ ತರುತ್ತೇನೆ. ಬಸ್ ವ್ಯವಸ್ಥೆ ಕಲ್ಪಿಸುತ್ತೇನೆ. ಇದರಿಂದ ಮಕ್ಕಳು ಐ.ಎ.ಎಸ್. ಐ.ಪಿ.ಎಸ್. ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳಾಗಲು ಅನುಕೂಲವಾಗುತ್ತದೆ. ಕೊರೋನಾದಂತ ಸಂಕಷ್ಠ ಕಾಲದಲ್ಲಿ ಪ್ರಧಾನಿ ನರೇಂದ್ರಮೋದಿರವರು 135 ಕೋಟಿ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಡವರು ಯಾರು ಹಸಿವಿನಿಂದ ನರಳಬಾರದೆಂದು ಉಚಿತವಾಗಿ ಅಕ್ಕಿ ಗೋಧಿ ಕೊಟ್ಟಿದ್ದಾರೆ. ಇದಕ್ಕಿಂತ ಉತ್ತಮ ಕೆಲಸ ಇನ್ನೇನು ಮಾಡಬೇಕು ಎಂದು ಕ್ಷೇತ್ರದ ಜನತೆಯನ್ನು ಎಂ.ಚಂದ್ರಪ್ಪ ಪ್ರಶ್ನಿಸಿದರು?
ಮಹೇಶಣ್ಣ, ಕುಮಾರಣ್ಣ, ಶೇಖರ್, ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಮತಯಾಚನೆಯಲ್ಲಿದ್ದರು.