ಚಿಕ್ಕಜಾಜೂರು : ರಾಜ್ಯದಲ್ಲಿ ಬಿಜೆಪಿ. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಗಣೇಶ, ಯುಗಾದಿ, ದೀಪಾವಳಿ ಹಬ್ಬದ ಪ್ರಯುಕ್ತ ಮೂರು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ಕೊಡಲು ತೀರ್ಮಾನಿಸಿದ್ದೇವೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನತೆಗೆ ಭರವಸೆ ನೀಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪ ಪರ ಚಿಕ್ಕಜಾಜೂರಿನಲ್ಲಿ ಗುರುವಾರ ರೋಡ್ ಶೋ ನಡೆಸಿ ಮಾತನಾಡಿದರು.
ಕಳೆದ ಐದು ವರ್ಷಗಳಿಂದ ಹೊಳಲ್ಕೆರೆ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸಿರುವ ಎಂ.ಚಂದ್ರಪ್ಪನವರನ್ನು ಈ ಬಾರಿಯ ಚುನಾವಣೆಯಲ್ಲಿ ಐವತ್ತರಿಂದ ಅರವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪನವರು ಬಿಪಿಎಲ್. ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ಹಾಲು ಹಾಗೂ ಐದು ಕೆ.ಜಿ.ಅಕ್ಕಿ, ಐದು ಕೆ.ಜಿ.ಸಿರಿಧಾನ್ಯ ನೀಡಲಾಗುವುದು. ಗರ್ಭಿಣಿ ಸ್ತ್ರೀಯರಿಗೆ ಆರು ಪೌಷ್ಠಿಕಾಂಶವುಳ್ಳ 21 ಸಾವಿರ ರೂ.ಮೊತ್ತದ ಕಿಟ್ಗಳನ್ನು ವಿತರಿಸಲಾಗುವುದು. ವಿಧವೆಯರಿಗೆ ನೀಡುತ್ತಿರುವ ಮಾಸಿಕ ಪಿಂಚಣಿ ಎಂಟು ನೂರು ರೂ.ಗಳನ್ನು ಎರಡು ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗುವುದು ಎಂದು ಹೇಳಿದರು.
ಹಿರಿಯ ನಾಗರೀಕರಿಗೆ ಪ್ರತಿ ವರ್ಷವೂ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಹತ್ತು ಲಕ್ಷ ಮನೆಗಳನ್ನು ಕಟ್ಟಿಸಿಕೊಡುವ ತೀರ್ಮಾನ ಮಾಡಲಾಗಿದೆ ಎಂದು ವಾಗ್ದಾನ ಮಾಡಿದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ಇದೆ ತಿಂಗಳ ಹತ್ತರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಎಂ.ಚಂದ್ರಪ್ಪನವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿದರು.
ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿರವರು 24 ಗಂಟೆಯಲ್ಲಿ 18 ಗಂಟೆಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಕೃಷಿ ಸಮ್ಮಾನ್, ಆಯುಷ್ಮಾನ್ ಭಾರತ್ ಪ್ರಮುಖ ಯೋಜನೆಗಳು. ಅದೇ ರೀತಿ ರಾಜ್ಯ ಸರ್ಕಾರ ವಿಧವೆಯರಿಗೆ ಮಾಶಾಸನ, ರೈತರ ಸಾಲ ಮನ್ನ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಎಲ್ಲಾ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ನೆರವು. ನಮ್ಮ ಪಕ್ಷದ ಅಭ್ಯರ್ಥಿ ಎಂ.ಚಂದ್ರಪ್ಪನವರ ಮೇಲೆ ಕೆಲವು ಲಿಂಗಾಯಿತರೆ ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಯಾರು ಕಿವಿಗೊಡಬಾರದು. ಚಂದ್ರಪ್ಪನ ಮೇಲೆ ದ್ವೇಷ ಇಟ್ಟುಕೊಳ್ಳಬೇಡಿ. ಈ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ಗುರಿಯಿಟ್ಟುಕೊಂಡಿದ್ದು, ಲಿಂಗಾಯಿತರೆ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಹೇಳಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಚಂದ್ರಪ್ಪ ಮಾತನಾಡುತ್ತ ರಾಜ್ಯದ 224 ಕ್ಷೇತ್ರಗಳಲ್ಲಿ ನನ್ನ ಕ್ಷೇತ್ರದ ಮೇಲೆ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ನಂಬಿಕೆಯಿಟ್ಟು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ನಾಲ್ಕು ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೆರೆ ಕಟ್ಟೆಗಳನ್ನು ತುಂಬಿಸುವುದಕ್ಕಾಗಿ 950 ಕೋಟಿ ರೂ.ಗಳನ್ನು ಮಂಜೂರು ಮಾಡಿದರು. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೇರವಾಗಿ ನೀರು ತಂದು ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 510 ಕೋಟಿ ರೂ.ಗಳನ್ನು ಕೊಟ್ಟಿದ್ದರು. ಇಡಿ ರಾಜ್ಯದಲ್ಲಿಯೇ ಹೆಚ್ಚು ಅಡಿಕೆ ತೋಟಗಳಿರುವ ಹೊಳಲ್ಕೆರೆ ತಾಲ್ಲೂಕಿನಲ್ಲಿ ರೈತರು ಕಷ್ಟ ಅನುಭವಿಸಬಾರದೆಂದು ದಿನಕ್ಕೆ ಐದಾರು ಗಂಟೆ ವಿದ್ಯುತ್ ಪೂರೈಸುವುದಕ್ಕಾಗಿ 750 ಕೋಟಿ ರೂ.ಗಳನ್ನು ನೀಡಿದ್ದಾರೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ನೀಡಿ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಇಲ್ಲಿಂದ ಗೆದ್ದು ಹೋಗಿ ಐದು ವರ್ಷಗಳ ಕಾಲ ಮಂತ್ರಿಯಾಗಿದ್ದ ಹೆಚ್.ಆಂಜನೇಯ ಕ್ಷೇತ್ರದಲ್ಲಿ ಏನು ಕೆಲಸ ಮಾಡದ ಕಾರಣ 2018 ರ ಚುನಾವಣೆಯಲ್ಲಿ ಸೋಲಿಸಿ ನನ್ನನ್ನು ನಲವತ್ತು ಸಾವಿರ ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದಿರಿ. ಈ ಬಾರಿಯ ಚುನಾವಣೆಯಲ್ಲಿ ಐವತ್ತರಿಂದ ಅರವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮತದಾರರನ್ನು ಕೋರಿದರು.
ಐದು ವರ್ಷಗಳ ಕಾಲ ನಿಮ್ಮ ಮನೆ ಮಗನಾಗಿ ಆಳಾಗಿ ದುಡಿದಿದ್ದೇನೆ. ಚಿಕ್ಕಜಾಜೂರಿನಲ್ಲಿ ಹದಿನೆಂಟು ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಹಿರೇಕಂದವಾಡಿ ರಸ್ತೆಗೆ ಹನ್ನೊಂದು ಕೋಟಿ ರೂ.ಗಳನ್ನು ನೀಡಿದ್ದೇನೆಂದು ಅಭಿವೃದ್ದಿಯ ಹಾದಿಯನ್ನು ಬಿಚ್ಚಿಟ್ಟರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನೇಕಾರರ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ, ಪಿ.ಎಸ್.ಮೂರ್ತಿ, ಮಂಡಲ ಅಧ್ಯಕ್ಷ ಸಿದ್ದೇಶ್, ಶೈಲೇಶ್, ಜಿಲ್ಲಾ ಚುನಾವಣಾ ಉಸ್ತುವಾರಿ ಮಲ್ಲಿಕಾರ್ಜುನ್, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಮುಖಂಡರಾದ ಡಿ.ಸಿ.ಮೋಹನ್, ಇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ಸುಮಾ ಲಿಂಗರಾಜ್, ಕೃಷ್ಣಮೂರ್ತಿ, ಈಶ್ವರಪ್ಪ ನುಲೇನೂರು, ಅಶೋಕ್ ಬಿಜ್ಜನಾಳ, ಅರುಣ್ ನುಲೇನೂರು, ಟಿ.ಸಿ.ರಾಜಪ್ಪ ಸೇರಿದಂತೆ ಮುಖಂಡರು, ಕಾರ್ಯಕರ್ತರು ಸಾಗರೋಪಾದಿಯಲ್ಲಿ ಜಮಾಯಿಸಿ ಅಭ್ಯರ್ಥಿ ಎಂ.ಚಂದ್ರಪ್ಪನವರಿಗೆ ಬೆಂಬಲ ಸೂಚಿಸಿದರು.