ಚಿತ್ರದುರ್ಗ: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಗಳು ಹಾಗೂ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯ ವಿವರ ಇಲ್ಲಿ ನೀಡಲಾಗಿದೆ.
ನಾಮಪತ್ರ ನಮೂನೆ-2ಬಿ: ಒಂದು ಮೂಲ ಪ್ರತಿ ಹಾಗೂ ಒಂದು ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ನಾಮಪತ್ರ ಸಂಪೂರ್ಣವಾಗಿ ಭರ್ತಿ ಮಾಡಿರಬೇಕು. ಅಭ್ಯರ್ಥಿ ಹಾಗೂ ಸೂಚಕರು ಕಡ್ಡಾಯವಾಗಿ ಸಹಿ ಮಾಡಿರಬೇಕು. ಒಬ್ಬ ಅಭ್ಯರ್ಥಿಯು ನಾಲ್ಕ ನಾಮಪತ್ರಗಳನ್ನು ಸಲ್ಲಿಸಬಹುದು. ಯಾವುದೇ ಅಭ್ಯರ್ಥಿಯು ಎರಡಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವಂತಿಲ್ಲ. ಸಹಿ ಮಾಡಿರದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು.
ನಮೂನೆ-26ರಲ್ಲಿ ಶಪಥಪತ್ರ/ಅಫಿಡವಿಟ್: ಶಪಥಪತ್ರ/ಅಫಿಡವಿಟ್‍ನ್ನು 20 ರೂಪಾಯಿಯ ಛಾಪಾ ಕಾಗದಲ್ಲಿ ಒಂದು ಮೂಲಪ್ರತಿ ಹಾಗೂ ಮೂರು ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಎಲ್ಲಾ ಕಾಲಂಗಳನ್ನು ತುಂಬಿರಬೇಕು. ಅನ್ವಯವಾಗದ ಕಾಲಂಗಳಲ್ಲಿ ಅನ್ವಯಿಸುವುದಿಲ್ಲ/ ಓIಐ ಎಂದು ಬರೆಯಬೇಕು. ಶಪಥ ಬೋಧಿಸುವ ಕಮಿಷನರ್/ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ ಮುಂದೆ, ಒಬ್ಬ ನೋಟರಿ ಪಬ್ಲಿಕ್ ಅಥವಾ ಚುನಾವಣಾಧಿಕಾರಿಗಳ ಮುಂದೆ ಪ್ರಮಾಣ ಮಾಡಬೇಕು. ನೋಟರಿ ಪಬ್ಲಿಕ್‍ರಿಂದ ಎಲ್ಲಾ ಪುಟಗಳನ್ನು ದೃಢೀಕರಿಸಬೇಕು. ಅಫಿಡವಿಟ್‍ನ ಕ್ರಮಸಂಖ್ಯೆ 3ರಲ್ಲಿ ಅಭ್ಯರ್ಥಿ ಹೊಂದಿರುವ ಫೇಸ್‍ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಪರ್ಸನಲ್ ಆಪ್, ಪರ್ಸನಲ್ ವೆಬ್‍ಸೈಟ್, ಯುಟ್ಯೂಬ್ ಚಾನಲ್, ಬ್ಲಾಗ್ ಮುಂತಾದ ಸಾಮಾಜಿಕ ಜಾಲತಾಣಗಳ ಸಂಪೂರ್ಣ ವಿವರ ನೀಡಬೇಕು. ಅಫಿಡವಿಟ್ ಸಲ್ಲಿಸದಿರುವುದು ಜನತಾ ಪ್ರಾತಿನಿಧ್ಯ ಕಾಯ್ದೆ-1951ರ ಕಲಂ 36ರ ಪ್ರಕಾರ ಅನರ್ಹತೆಯ ಮಾನದಂಡವಾಗುತ್ತದೆ.
ಅಭ್ಯರ್ಥಿಯ ಚುನಾವಣಾ ಗುರುತಿನ ಚೀಟಿ ಪ್ರತಿ: ಅಭ್ಯರ್ಥಿಯು ತನ್ನ ಚುನಾವಣಾ ಗುರುತಿನ ಚೀಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಬೇಕು.
ಮತದಾರರ ಪಟ್ಟಿಯ ಪ್ರಮಾಣೀಕೃತ ಉದ್ಕøತ ಭಾಗ: ಅಭ್ಯರ್ಥಿಯು ಬೇರೆ ಚುನಾವಣಾ ಕ್ಷೇತ್ರದ ಭಾಗದ ಮತದಾರನಾಗಿರುವಾಗ ಮತದಾರರ ಪಟ್ಟಿಯ ಪ್ರಮಾಣಿಕೃತ ಉದ್ಕøತ ಭಾಗವನ್ನು ಸಲ್ಲಿಸಬೇಕು.
ಸೂಚಕರ ಚುನಾವಣಾ ಗುರುತಿನ ಚೀಟಿಯ ಪ್ರತಿ: ಸೂಚಕರು ಅದೇ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ಸೂಚಕರು ತಮ್ಮ ಚುನಾವಣಾ ಗುರುತಿನ ಚೀಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿರಬೇಕು. ಮಾನ್ಯತೆ ಹೊಂದಿದ ನೋಂದಾಯಿತ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ-ಒಬ್ಬರು ಸೂಚಕರು, ಮಾನ್ಯತೆ ಹೊಂದಿರದ ನೊಂದಾಯಿತ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ-10 ಜನ ಸೂಚಕರು. ಒಂದು ರಾಜ್ಯದಲ್ಲಿ ಮಾನ್ಯತೆ ಪಡೆದಿರುವ ರಾಜ್ಯ ಪಕ್ಷವು ಹಾಗೆ ಮಾನ್ಯತೆ ಪಡೆದಿಲ್ಲದಿರುವ ಇನ್ನೊಂದು ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರೆ, ಅಂಥ ಇತರ ರಾಜ್ಯದಲ್ಲಿ ಆ ಪಕ್ಷದ ಮೂಲಕ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ-10 ಜನ ಸೂಚಕರು ಬೇಕು.
ನಮೂನೆ ಎ ಮತ್ತು ಬಿ: ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸುವ ಅಭ್ಯರ್ಥಿಗಳ ಸಂದರ್ಭದಲ್ಲಿ ಇದು ಅನ್ವಯಿಸುತ್ತದೆ. ನಾಮಪತ್ರಗಳನ್ನು ಸಲ್ಲಿಸುವ ಕಡೆಯ ದಿನಾಂಕದಂದು ಮಧ್ಯಾಹ್ನ 3 ಗಂಟೆಯೊಳಗೆ ನಮೂನೆ ಎ ಮತ್ತು ಬಿ ಗಳನ್ನು ಸಲ್ಲಿಸದೆ ಇದ್ದಲ್ಲಿ ನಾಮಪತ್ರವನ್ನು ತಿರಸ್ಕರಿಸಲಾಗುವುದು.
ಜಾತಿ ಪ್ರಮಾಣ ಪತ್ರ : ಅಭ್ಯರ್ಥಿಯು ಪ.ಜಾತಿ/ಪ.ಪಂ ವರ್ಗಕ್ಕೆ ಸೇರಿರುವುದಾಗಿ ಕ್ಲೇಮ್ ಮಾಡಲು ಅಥವಾ ಭದ್ರತಾ ಠೇವಣಿಗೆ ಸಂಬಂಧಿಸಿದಂತೆ 5,000 ರೂ ವಿನಾಯತಿ ಪಡೆಯಲು ಸಕ್ಷಮ ಪ್ರಾಧಿಕಾರದಿಂಧ ಪಡೆದ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಭದ್ರತಾ ಠೇವಣಿ : ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ (ಜಾತಿ ಪ್ರಮಾಣ ಪತ್ರ ಸಲ್ಲಿಸಿದಲ್ಲಿ ) –ರೂ.5000/- ಇತರೆ ಅಭ್ಯರ್ಥಿಗಳಿಗೆ – ರೂ,10000/- ಭದ್ರತಾ ಠೇವಣಿಯನ್ನು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಗದು ಮೂಲಕ ಅಥವಾ ಖಜಾನೆಯ ಚಲನ್ ಮೂಲಕ ಪಾವತಿಸಬೇಕು. (ಚೆಕ್/ಡಿ.ಡಿ ಮೂಲಕ ಪಾವತಿಸಲು ಅವಕಾಶವಿಲ್ಲ) ಭದ್ರತಾ ಠೇವಣಿಯನ್ನು ಪಾವತಿಸದ್ದಿದರೆ ನಾಮಪತ್ರವನ್ನು ತಿರಸ್ಕರಿಸಲಾಗುವುದು.
ನಾಮಪತ್ರ ಸಲ್ಲಿಸಿದ ನಂತರ ಹಾಗೂ ನಾಮಪತ್ರ ಪರಿಶೀಲನೆಗಾಗಿ ನಿಗಧಿಪಡಿಸಿದ ದಿನಾಂಕಕ್ಕೆ ಮುಂಚೆ (20.04.2023 ರ ಮಧ್ಯರಾತ್ರಿ 12:00 ಗಂಟೆಯೊಳಗೆ) ಶಪಥ ಭೋಧಿಸುವ ಕಮೀಷನರ್/ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ನೋಟರಿ ಅಥವಾ ಚುನಾವಣಾಧಿಕಾರಿಗಳ ಮುಂದೆ ಪ್ರಮಾಣ ಮಾಡಬೇಕು. ಶಪಥ/ಪ್ರಮಾಣ ವಚನ ಮಾಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಚುನಾವಣಾ ವೆಚ್ಚಗಳ ಉದ್ದೇಶಕ್ಕಾಗಿಯೇ ತೆರೆದಿರುವ ಹೊಸ ಬ್ಯಾಂಕ್ ಖಾತೆಯ ಪಾಸ್ ಬುಕ್‍ನ ನಕಲು ಪ್ರತಿಯನ್ನು ಸಲ್ಲಿಸಬೇಕು. ನಾಮ ಪತ್ರ ಸಲ್ಲಿಸುವ ಕನಿಷ್ಠ ಒಂದು ದಿನ ಮುಂಚಿತವಾಗಿ ಬ್ಯಾಂಕ್ ಖಾತೆಯನ್ನು ತೆರೆದಿರಬೇಕು.
ಅಭ್ಯರ್ಥಿಗಳು ಅವರ ಇತ್ತೀಚಿನ ಅಂದರೆ ಚುನಾವಣಾ ಅಧಿಸೂಚನೆಯ ದಿನಾಂಕಕ್ಕಿಂತ ಮುಂಚಿನ 3 ತಿಂಗಳ ಅವಧಿಯಲ್ಲಿ ತೆಗೆಸಿರುವ 4 ಕಲರ್ ಮತ್ತು 4 ಕಪ್ಪು ಬಿಳುಪು ಭಾವಚಿತ್ರಗಳನ್ನು ಸಲ್ಲಿಸಬೇಕು.
ಭಾವಚಿತ್ರವು 2 ಸೆಂ.ಮೀ ಅಗಲ ಹಾಗೂ 2.5 ಸೆಂ.ಮೀ ಎತ್ತರದ ಸ್ಟ್ಯಾಂಪ್ ಅಳತೆಯ ಬಿಳಿ/ಅರೆಬಿಳಿ ಹಿನ್ನೆಲೆಯುಳ್ಳ ಕ್ಯಾಮೆರಾವನ್ನು ನೋಡುತ್ತಿರುವ ಪೂರ್ಣ ಮುಖವುಳ್ಳ, ಕಣ್ಣುಗಳು ತೆರೆದಿರುವ ಸಹಜ ಮುಖಭಾವವುಳ್ಳದ್ದಾಗಿರಬೇಕು.
ಭಾವಚಿತ್ರವು ಸಾಮಾನ್ಯ ಉಡುಪಿನಲ್ಲಿ ತೆಗೆಸಿದ್ದಾಗಿರಬೇಕು. ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಅನುಮತಿಸುವುದಿಲ್ಲ. ಟೋಪಿಗಳನ್ನು ಕಡು ಕಪ್ಪು ಕನ್ನಡಕಗಳನ್ನು ಸಹ ಹಾಕಿರಬಾರದು.
ಭಾವಚಿತ್ರ ಸಲ್ಲಿಸುವ ಅಭ್ಯರ್ಥಿ/ಚುನಾವಣಾ ಏಜೆಂಟ್/ಸೂಚಕನು ಅದು ಚುನಾವಣಾ ಅಧಿಸೂಚನೆಯ ದಿನಾಂಕಕ್ಕಿಂತ ಮುಂಚಿನ ಮೂರು ತಿಂಗಳ ಅವಧಿಯಲ್ಲಿ ತೆಗೆದುದ್ದಾಗಿದ್ದು, ಅದು ಅಭ್ಯರ್ಥಿಯ ಭಾವಚಿತ್ರವೇ ಆಗಿರುವುದನ್ನು ತಿಳಿಸುವ (ಹೆಸರು ಮತ್ತು ವಿಳಾಸವನ್ನು ಸೂಚಿಸಿ) ಘೋಷಣೆಯನ್ನು ಸಲ್ಲಿಸಬೇಕು.
ಅಭ್ಯರ್ಥಿಯು ಚುನಾವಣೆ ಏಜೆಂಟರನ್ನು ನೇಮಕ ಮಾಡಿಕೊಳ್ಳಲು ನಮೂನೆ-8ನ್ನು ಭರ್ತಿಮಾಡಿ ಸಹಿಯೊಂದಿಗೆ ಸಲ್ಲಿಸಬೇಕು.
ಚುನಾವಣಾ ಏಜೆಂಟರು ಭಾವಚಿತ್ರದ ಹಿಂದೆ ಸಹಿ ಮಾಡಿ 4 ಭಾವಚಿತ್ರಗಳನ್ನು ಸಲ್ಲಿಸಬೇಕು.
ಅಭ್ಯರ್ಥಿಯು ತಮ್ಮ ಚುನಾವಣಾ ಏಜೆಂಟರು ಸ್ವಯಂ ಧೃಡೀಕರಿಸಿದ ಚುನಾವಣಾ ಗುರುತಿನ ಚೀಟಿಯನ್ನು ಸಲ್ಲಿಸಬೇಕು. ಚುನಾವಣಾ ಏಜೆಂಟರು ಇದೇ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು.
ಮಂತ್ರಿಗಳು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಭದ್ರತಾ ಸಿಬ್ಬಂದಿಯ ಭದ್ರತೆ ಪಡೆದ ಯಾವುದೇ ವ್ಯಕ್ತಿ ಚುನಾವಣಾ ಏಜೆಂಟ್ ಆಗಲು ಅವಕಾಶವಿಲ್ಲ.
ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟರ ಮಾದರಿ ಸಹಿಗಳನ್ನು ನಿಗದಿತ ನಮೂನೆಯನ್ನು ಸಲ್ಲಿಸಬೇಕು.
ಅಭ್ಯರ್ಥಿಯು, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಸಂಪೂರ್ಣ ಅಂಚೆ ವಿಳಾಸ ಮತ್ತು ಬ್ಯಾಂಕ್ ಖಾತೆಯ ವಿವರಗಳ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕು.
ಅಭ್ಯರ್ಥಿಯು ಸರ್ಕಾರಿ ವಸತಿ ಗೃಹದ ಬಾಡಿಗೆ ವಿದ್ಯುಚ್ಛಕ್ತಿ ಬಿಲ್, ನೀರಿನ ಕರ ಮತ್ತು ದೂರವಾಣಿ ಬಿಲ್ ಬಾಕಿ ಇಲ್ಲದಿರುವ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು (ಅಫಿಡವಿಟ್ ಪ್ರಕಾರ ಅನ್ವಯಿಸಿದಲ್ಲಿ ಮಾತ್ರ)
ಅಭ್ಯರ್ಥಿಯು ಆಸ್ತಿ ತೆರಿಗೆ, ನೀರಿನ ಕರ, ಯು.ಜಿ.ಡಿ ಶುಲ್ಕ ಹಾಗೂ ಇತರೆ ಯಾವುದೇ ಬಾಕಿ ಇಲ್ಲದೆ ಇರುವ ಕುರಿತು ಮಹಾನಗರ ಪಾಲಿಕೆಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಅಭ್ಯರ್ಥಿಯು ಚುನಾವಣಾ ಆಯೋಗವು ಕಾಲ ಕಾಲಕ್ಕೆ ಸೂಚಿಸುವ ಇನ್ನಿತರೆ ದಾಖಲೆಗಳನ್ನು ಸಲ್ಲಿಸಬೇಕು.