ಬೆಂಗಳೂರು: ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡಗೆ ವಿಶೇಷ ಪಡೆ ರಚಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಕೆಲವು ಉಚಿತ ಕೊಡುಗೆಗಳ ಜತೆಗೆ, ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಜತೆಗೆ ಕೈಗೆಟಕುವ ದರದಲ್ಲಿ ರೋಗ ನಿರ್ಣಯ ಸೌಲಭ್ಯ, ಕೃಷಿ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಸಾಗಿಸುವ ರೈತರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ. ಐಎಎಸ್, ಕೆಎಎಸ್, ಬ್ಯಾಂಕಿಂಗ್, ಸರ್ಕಾರಿ ಉದ್ಯೋಗಾಂಕಾಂಕ್ಷಿಗಳಿಗೆ ತರಬೇತಿ ಪಡೆಯಲು ಧನ ಸಹಾಯ, ವಿಧವೆಯರ ತಿಂಗಳ ಪಿಂಚಣಿಯನ್ನು ₹800 ರಿಂದ ₹2,000 ಕ್ಕೆ ಹೆಚ್ಚಿಸುವುದು, ತಿರುಪತಿ, ಅಯೋಧ್ಯೆ, ಕಾಶಿ, ರಾಮೇಶ್ವರ, ಕೊಲ್ಹಾಪುರ ಮತ್ತು ಕೇದಾರನಾಥ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವ ಬಡ ಕುಟುಂಬಗಳಿಗೆ ಒಂದು ಬಾರಿಗೆ ₹25 ಸಾವಿರ ಧನಸಹಾಯದ ಭರವಸೆ ನೀಡಲಾಗಿದೆ.
ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲ ಸಿಲಿಂಡರ್ಗಳು ಉಚಿತ
ಪ್ರತಿ ಬಿಪಿಎಲ್ ಕುಟುಂಬಕ್ಕೆ ‘ಪೋಷಣೆ’ ಯೋಜನೆ ಅಡಿ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ
ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ ಸಿರಿಧಾನ್ಯಗಳಿರುವ ಪಡಿತರ ಕಿಟ್
ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆ ವಾರ್ಡ್ ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ ಸ್ಥಾಪನೆ
ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿ ಎಸ್ಸಿ–ಎಸ್ಟಿ ಸಮುದಾಯದ ಮಹಿಳೆಯರು 5 ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳಷ್ಟೇ ಮೊತ್ತವನ್ನು ಸರ್ಕಾರ ನೀಡಲಿದೆ. ಇದಕ್ಕೆ ಗರಿಷ್ಠ ಮಿತಿ ₹10 ಸಾವಿರ ಎಂಬ ಭರವಸೆಯನ್ನೂ ಬಿಜೆಪಿ ಕೊಟ್ಟಿದೆ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.