ಬೇಸಿಗೆ ಕಾಲದಲ್ಲಿ ಬದುಕು ಬಸವಳಿಯದಿರಲು ಹೆಚ್ಚು ಹೆಚ್ಚು ನೀರು, ಮಜ್ಜಿಗೆ ಕುಡಿಯಿರಿ. ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿ ಬಳಸಿ. ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಕೊಡಿ. ಈ ಬಿಸಿಲಿನಲ್ಲಿ ವಿಟಮಿನ್ “ಸಿ” ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ. ಇಲ್ಲಿ ಸಕ್ಕರೆ ಬದಲು ಬೆಲ್ಲ ಬಳಸಿ ಬೆಳಗ್ಗೆ ಎದ್ದ ತಕ್ಷಣ “ತುಳಸಿ” ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ. ಇದರಿಂದ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ.
ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ, ಇಲ್ಲವಾದರೆ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆ ಜೊತೆಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು. ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ “ಹರಳೆಣ್ಣೆ” ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ. ವಯಸ್ಕರೂ ಇದನ್ನು ಅನುಸರಿಸಬೇಕು. ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲ ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ, ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ.
ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ.
ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗುಲಬಹುದು. ಈ ಸಮಯದಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ ಎಂದರು.