ಚಿತ್ರದುರ್ಗ : ಬುಧವಾರ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ. ನಾಯಕತ್ವ ಸೋಲು ಒಪ್ಪಿಕೊಂಡಿರುವುದರಿಂದ ಪ್ರಧಾನಿ ನರೇಂದ್ರಮೋದಿ ಪದೆ ಪದೆ ಕರ್ನಾಟಕಕ್ಕೆ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದಾರೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು ಹಾಗೂ ಮಾಧ್ಯಮ ವಕ್ತಾರರಾದ ವಿ.ಎಸ್.ಉಗ್ರಪ್ಪ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ವಾಧಿಕಾರಿ ಪ್ರವೃತ್ತಿಯ ಬಿಜೆಪಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿರುವ ಕಾಂಗ್ರೆಸ್ ನಡುವೆ ಚುನಾವಣಾ ಸಂಘರ್ಷ ಏರ್ಪಟ್ಟಿದೆ. ಮೋದಿ ವರ್ಚಸ್ಸು ನೋಡಿ ರಾಜ್ಯದ ಜನ ಬಿಜೆಪಿ.ಗೆ ಮತ ಹಾಕುತ್ತಾರೆಂಬ ಭ್ರಮೆಯಲ್ಲಿ ಬಿಜೆಪಿ. ನಾಯಕರುಗಳು ಮುಳುಗಿದ್ದಾರೆ. ಅಮೇರಿಕಾದ ಡೊನಾಲ್ಡ್ ಟ್ರಂಪ್ ಚುನಾವಣೆಗೆ ನಿಂತಾಗಲು ಮೋದಿ ಅಲ್ಲಿಗೆ ಪ್ರಚಾರಕ್ಕೆ ಹೋಗಿದ್ದರು. ಆಗ ಫಲಿತಾಂಶ ಏನಾಯಿತು ಎನ್ನುವುದು ವಿಶ್ವಕ್ಕೆ ಗೊತ್ತಿದೆ. ಅದೇ ರೀತಿ ಕರ್ನಾಟಕದ ಫಲಿತಾಂಶವು ಬರುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಆರು ನೂರು ಭರವಸೆಗಳನ್ನು ನೀಡಿದ ಬಿಜೆಪಿ. ಕೇವಲ 58 ಭರವಸೆಗಳನ್ನು ಮಾತ್ರ ಈಡೇರಿಸಿದೆ. ಕಾಂಗ್ರೆಸ್ 165 ಭರವಸೆಗಳನ್ನು ನೀಡಿ ಅದರಲ್ಲಿ 159 ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಎರಡನೆ ಸಾರಿ ಪ್ರಧಾನಿಯಾಗುವ ಮುನ್ನ ನರೇಂದ್ರಮೋದಿ ಭ್ರಷ್ಟಾಚಾರ ನಿಲ್ಲಿಸಿ ವಿದೇಶದಲ್ಲಿರುವ ಕಪ್ಪು ಹಣ ತಂದು ನಕಲಿ ನೋಟುಗಳ ಚಲಾವಣೆಯನ್ನು ತಡೆಯುತ್ತೇನೆಂದು ದೇಶದ ಜನರಿಗೆ ಆಶ್ವಾಸನೆ ನೀಡಿದ್ದರು. ಉಗ್ರರ ಬಳಿಯಿರುವ ಹಣ ಹಿಂದಕ್ಕೆ ತಂದು ದೇಶದ ಪ್ರತಿ ಬಡವರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುವುದಾಗಿ ಆಸೆ ಹುಟ್ಟಿಸಿ ಮೋಸ ಮಾಡಿದ್ದನ್ನು ಜನ ಯಾರು ಮರೆತಿಲ್ಲ. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ ಪ್ರಧಾನಿ ಹದಿನಾಲ್ಕು ಕೋಟಿ ಉದ್ಯೋಗವನ್ನು ಕಳೆದಿದ್ದಾರೆ. ಕೊನೆಗೆ ಯುವಕರು ಕೆಲಸ ಕೇಳಿದರೆ ಪಕೋಡ ವಡೆ ಮಾರಿ ಎಂದು ಅಮಾನಿಸಿದ್ದಾರೆ. ಡಬ್ಬಲ್ ಇಂಜಿನ್ ಸರ್ಕಾರ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130 ರಿಂದ 150 ಸೀಟುಗಳನ್ನು ಗೆದ್ದು ಸರ್ಕಾರ ರಚಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿರುವ ಬಿಜೆಪಿ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಪ್ರವಾಹವಿದ್ದಾಗ ವಿಶೇಷ ಅನುದಾನ ನೀಡುವಂತೆ ರಾಜ್ಯ ಕೇಳಿಕೊಂಡಾಗಲೂ ಯಾವ ನೆರವು ಸಿಗಲಿಲ್ಲ. ಮನಮೋಹನ್ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ 2009 ರಲ್ಲಿ ರಾಯಚೂರಿನಲ್ಲಿ ಪ್ರವಾಹವಾದಾಗ ವೈಮಾನಿಕ ಸಮೀಕ್ಷೆ ನಡೆಸಿ 1500 ಕೋಟಿ ರೂ.ಗಳನ್ನು ಘೋಷಿಸಿದರು. ಪ್ರಧಾನಿ ಮೋದಿಗೆ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಬದಲು ಅಧಿಕಾರ ಹಿಡಿಯುವ ತವಕ ಹೆಚ್ಚಾಗಿದೆ. ನಾಲ್ಕೈದು ಬಾರಿ ರಾಜ್ಯಕ್ಕೆ ಬಂದಾಗಲೂ ಯಾವ ಕೊಡುಗೆ ಕೊಟ್ಟಿಲ್ಲ. ಕುದಾಪರ ಸಮೀಪವಿರುವ ಡಿ.ಆರ್.ಡಿ.ಓ.ಗೆ ಮೊನ್ನೆ ಬಂದಾಗಲು ಅಲ್ಲಿನ ಸುತ್ತಮುತ್ತಲಿನ ಜನತೆಗೆ ಯಾವ ಅನುಕೂಲವನ್ನು ಘೋಷಿಸಲಿಲ್ಲ. ಪುಲ್ವಾಮ ದಾಳಿಯಲ್ಲಿ 42 ಸೈನಿಕರು ಹತರಾಗಲು ಪ್ರಧಾನಿ ಮೋದಿಯೇ ನೇರ ಕಾರಣ ಎಂದು ವಿ.ಎಸ್.ಉಗ್ರಪ್ಪ ಆಪಾದಿಸಿದರು.
ರಾಮಜನ್ಮಭೂಮಿ, ಗೋಹತ್ಯೆ, ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಇವೆಲ್ಲಾ ಮುಗಿದು ಹೋಗಿರುವುದರಿಂದ ಯಾವ ಸಾಧನೆ, ಕಾರ್ಯಕ್ರಮ ಬಿಜೆಪಿ. ಮುಂದೆ ಇಲ್ಲ.ಪ್ರಚೋದನಾತ್ಮಕ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಪಿ.ಎಫ್.ಐ. ಭಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳಿರುವುದನ್ನು ದೊಡ್ಡ ರಾದ್ದಾಂತ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಲವತ್ತು ಪರ್ಸೆಂಟ್ ಕಮೀಷನ್ ದೂರಿದ್ದರೂ ಏಕೆ ಮೋದಿ ಯಾರ ಮೇಲೂ ಕ್ರಮ ಕೈಗೊಳ್ಳುತ್ತಿಲ್ಲ. ಹಾಲು, ಮೊಸರು, ಮಜ್ಜಿಗೆ, ಪೆನ್ಸಿಲ್, ನೋಟ್ಬುಕ್ ಮೇಲೆ ಜಿ.ಎಸ್.ಟಿ. ಹೇರಿದೆ. ಇದೆ ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಮುದಸಿರ್ ನವಾಜ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.