ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ.
2018 ರಲ್ಲಿ ಡಿಕೆಶಿ ವಿರುದ್ಧ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ನ್ಯಾ. ಸೂರ್ಯ ಕಾಂತ್ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ಇಂದು ರದ್ದುಗೊಳಿಸಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶ ಡಿಕೆಶಿಗೆ ಸಿಕ್ಕ ದೊಡ್ಡ ಜಯ ಎಂದೇ ಹೇಳಲಾಗುತ್ತಿದೆ.
ಆಗಸ್ಟ್ 2019 ರಲ್ಲಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ ಹೋದ ಡಿ.ಕೆ ಶಿವಕುಮಾರ್ ಮತ್ತು ಇತರೇ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಪೀಠ ಇಂದು ಮಹತ್ವದ ಆದೇಶ ನೀಡಿದೆ.