ನವದೆಹಲಿ: ಅಗತ್ಯ ಆಚರಣೆಗಳಿಲ್ಲದ, ವಿಧಿಬದ್ಧವಲ್ಲದ ಹಿಂದೂ ವಿವಾಹಗಳು ಅಸಿಂಧು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹ ವಿಚ್ಛೇದನ ಕೋರಿ ಇಬ್ಬರು ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ವಿವಾಹದ ಮಾನ್ಯತೆಗೆ ಕೇವಲ ಪ್ರಮಾಣ ಪತ್ರವಷ್ಟೇ ಸಾಲದು. ಅಗತ್ಯವಾದ ಧಾರ್ಮಿಕ, ಸಂಪ್ರದಾಯಗಳು ಶಾಸ್ತ್ರೋಕ್ತವಾಗಿ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ಹಿಂದೂ ವಿವಾಹ ಎಂಬುದು ಹಾಡು ಮತ್ತು ನೃತ್ಯಕ್ಕಾಗಿ, ಒಳ್ಳೆಯ ಭೋಜನ ಸವಿಯಲು ಅಥವಾ ವಾಣಿಜ್ಯ ವಹಿವಾಟು ನಡೆಸಲು ಇರುವ ಕಾರ್ಯಕ್ರಮ ಅಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, 1955ರ ಹಿಂದೂ ವಿವಾಹ ಕಾಯ್ದೆಗೆ ಅನುಗುಣವಾಗಿ ವಿವಾಹ ಆಗದೆ ಇದ್ದಲ್ಲಿ ಅದನ್ನು ಮಾನ್ಯ ಮಾಡಲು ಆಗದು ಎಂದು ಸ್ಪಷ್ಟಪಡಿಸಿದೆ. ಮದುವೆ ಬಹಳ ಪವಿತ್ರವಾದ ವಿಚಾರವಾಗಿದ್ದು, ಅದು ಒಬ್ಬ ವ್ಯಕ್ತಿಗೆ ಜೀವನ ಪರ್ಯಾಂತ ಗೌರವ, ಸಮಾನತೆ, ಒಮ್ಮತದ ಮತ್ತು ಆರೋಗ್ಯಯುತ ಸಂಬಂಧವನ್ನು ನೀಡುತ್ತದೆ. ಇದು ಪುರುಷ ಮತ್ತು ಮಹಿಳೆಯ ನಡುವೆ ಸಂಬಂಧವನ್ನು ಬೆಸೆಯಲು ಆಚರಿಸುವ ವಿಧ್ಯುಕ್ತ ಕಾರ್ಯಕ್ರಮವಾಗಿದೆ. ಪತಿ ಪತ್ನಿಯ ಸ್ಥಾನವನ್ನು ಪಡೆಯಲು ಯುವಕ-ಯುವತಿಯರು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಮಾನ್ಯವಾದ ವಿವಾಹ ಆಚರಣೆ ಇಲ್ಲದಿದ್ದರೂ ವಿವಾಹ ಆಗಿದೆ ಎಂಬಂತೆ ತೋರಿಸಿಕೊಳ್ಳುವ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
