ಯುವತಿ – ಯುವಕರು ಪ್ರೀತಿಯಲ್ಲಿ ಬೀಳುವುದು ಸಾಮಾನ್ಯ. ಅವರ ಪ್ರೀತಿಗೆ ಮನೆಯವರು ಒಪ್ಪಿ ಮದುವೆ ಮಾಡಿಸುವುದಿದೆ. ಕೆಲವೊಮ್ಮೆ ಒಪ್ಪಿಗೆ ಸಿಗದೇ ಹೋಗಬಹುದು. ಆದ್ರೆ, ಇಲ್ಲಿ ಎಲ್ಲವೂ ವಿಭಿನ್ನ. ಯಾಕೆಂದ್ರೆ ಇಲ್ಲಿ ಪ್ರೀತಿಗೆ ಬಿದ್ದಿದ್ದು ಬೇರೆ ಯಾರೂ ಅಲ್ಲ ಅತ್ತೆ ಹಾಗೂ ಅಳಿಯ. ಈ ಮದುವೆ ಮಾಡಿಸಿದ್ದು ಮಾವ! ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ಬಿಹಾರದ ಬಂಕಾದಲ್ಲಿ. ತನ್ನ ಹೆಂಡತಿಯ ತಾಯಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಅಳಿಯನನ್ನು ಮಾವ ಮತ್ತು ಗ್ರಾಮಸ್ಥರು ಸೇರಿ ಮದುವೆ ಮಾಡಿಸಿದ್ದಾರೆ. 55 ವರ್ಷದ ದಿಲೇಶ್ವರ್ ದರ್ವೆ ಅವರ ಪತ್ನಿ ಅವರ ಅಳಿಯ ಸಿಕಂದರ್ ಯಾದವ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು.
ಇತ್ತೀಚಿಗಷ್ಟೇ ಇವರಿಬ್ಬರ ಏಕಾಂತದ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಪ್ರೇಮ ಕಥೆ ಊರೆಲ್ಲಾ ಸುದ್ದಿಯಾಗುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಸೇರಿ ಅಳಿಯನೊಂದಿಗೆ ಅತ್ತೆಗೆ ಮದುವೆ ಮಾಡಿಸಿದ್ದಾರೆ.
ಸಿಕಂದರ್ ಯಾದವ್ ಪತ್ನಿಯನ್ನು ಕಳೆದುಕೊಂಡಿದ್ದ. ಕೆಲ ತಿಂಗಳುಗಳಿಂದ ಅತ್ತೆಯ ಮನೆಯಲ್ಲಿ ವಾಸಿಸಲು ಆರಂಭಿಸಿದ್ದ. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗಿದ್ದಾರೆ. ಈ ವೇಳೆ ಅತ್ತೆಯ ಪತಿಗೆ ಅನುಮಾನ ಬಂದಿದೆ. ಈ ಬಗ್ಗೆ ಆತ ತನಿಖೆ ನಡೆಸಿದ್ದು, ಇವರಿಬ್ಬರ ಅಕ್ರಮ ಸಂಬಂಧ ಬಯಲಾಗಿದೆ. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ದಿಲೇಶ್ವರ್ ಪಂಚಾಯಿತಿಗೆ ಮಾಹಿತಿ ನೀಡಿದ್ದರು. ಇದಲ್ಲದೇ, ಸಿಕಂದರ್ ಯಾದವ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಪಂಚಾಯತ್ ಮತ್ತು ಗ್ರಾಮಸ್ಥರ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾನೆ.
ದಿಲೇಶ್ವರ್ ಮತ್ತು ಗ್ರಾಮಸ್ಥರ ಒಪ್ಪಿಗೆಯೊಂದಿಗೆ, ಸಿಕಂದರ್ ಮತ್ತು ಅತ್ತೆಯ ವಿವಾಹ ಮಾಡಿಸಲಾಗಿದೆ. ಸದ್ಯ ಇವರಿಬ್ಬರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.