ನವದೆಹಲಿ: ಹರಿಯಾಣ ಮತ್ತು ಜಮ್ಮು- ಕಾಶ್ಮೀರ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸ್ಪಷ್ಟ ಫಲಿತಾಂಶ ಹೊರಬಿದ್ದಿದೆ. ಎರಡೂ ರಾಜ್ಯಗಳ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿದೆ. ಅದರಲ್ಲೂ ಹರಿಯಾಣದ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಯಾಗಿದೆ. ಕೇವಲ ಒಂದೇ ಒಂದು ಗಂಟೆಯಲ್ಲಿ ರಿಸಲ್ಟ್ ಉಲ್ಟಾಪಲ್ಟಾ ಆಗಿದೆ. ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸ್ಥಾನಗಳು ನೋಡ ನೋಡುತ್ತಿದ್ದಂತೆಯೆ ಒಂದೇ ಸಮನೇ ಏರಿಕೆಯಾಗಿತ್ತು. ಮತ ಎಣಿಕೆ ಆರಂಭಗೊಂಡ ಕೆಲ ಗಂಟೆಗಳಲ್ಲಿ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡು ಕ್ಲೀನ್ ಸ್ವೀಪ್ನತ್ತ ಸಾಗುತ್ತಿತ್ತು. ಸರಳ ಬಹುಮತ ಪಡೆದು ಕಾಂಗ್ರೆಸ್ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವುದು ಖಚಿತ ಅನ್ನೋವಾಗಲೇ ಫಲಿತಾಂಶ ಸಂಪೂರ್ಣ ತಲೆಕೆಳಗಾಗಿದೆ. ಈ ಮೂಲಕ ಗಂಟೆಯೊಳಗೆ ಟ್ರೆಂಡ್ ಚೇಂಜ್ ಆಗಿದ್ದು, ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದರೆ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿತ್ತು.
