ನವದೆಹಲಿ: ತಮಿಳುನಾಡು ರಾಜಕೀಯದಲ್ಲಿ ಹೊಸ ಹಾಗೂ ಮಹತ್ವದ ಬದಲಾವಣೆ ಆಗಿದೆ. ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ಅವರನ್ನು ನೇಮಕ ಮಾಡಲಾಗಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ತಂದೆ (ಎಂ.ಕೆ ಸ್ಟಾಲಿನ್) ಮುಖ್ಯಮಂತ್ರಿಯಾಗಿದ್ದರೆ, ಅವರ ಪುತ್ರ ಹಾಗೂ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಡಿಸಿಎಂ ಹುದ್ದೆಗೆ ಏರಲಿದ್ದಾರೆ. ಇದರೊಂದಿಗೆ ಅಪರೂಪದ ರಾಜಕೀಯಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಚಿವ ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ತಮಿಳುನಾಡು ಸಚಿವ ಸಂಪುಟ ಪುನಾರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಪ್ರಮಾಣ ವಚನ ಸಮಾರಂಭವು ತಮಿಳುನಾಡಿನ ಚೆನ್ನೈ ರಾಜಭವನದಲ್ಲಿ ಸೆಪ್ಟೆಂಬರ್ 29ರ (ಭಾನುವಾರ) ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ನೂತನ ಸಚಿವ ಸಂಪುಟ ಸಭೆಯಲ್ಲಿ 6 ಪ್ರಮುಖ ಸಚಿವರ ಖಾತೆಗಳನ್ನು ಬದಲಾಯಿಸಲಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಕ್ರೀಡಾ ಸಚಿವ ಸ್ಥಾನದ ಜೊತೆಗೆ, ಉದಯನಿಧಿ ಅವರಿಗೆ ಯೋಜನೆ ಮತ್ತು ಅಭಿವೃದ್ಧಿಯ ಖಾತೆಯನ್ನು ಸಹ ನೀಡಲಾಗಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಉದಯನಿಧಿ ಅವರಿಗೆ ಈಗಿರುವ ಖಾತೆಗಳ ಜೊತೆಗೆ ಯೋಜನೆ ಮತ್ತು ಅಭಿವೃದ್ಧಿ ಖಾತೆಯನ್ನು ಮಂಜೂರು ಮಾಡಿ ಉಪಮುಖ್ಯಮಂತ್ರಿ ಹುದ್ದೆಗೆ ನಿಯೋಜಿಸುವಂತೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಶಿಫಾರಸು ಮಾಡಿದ್ದರು. ಹಿಂದೆಯೂ ಆಗಿತ್ತು: ಅಪ್ಪ ಮುಖ್ಯಮಂತ್ರಿ ಹಾಗೂ ಪುತ್ರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದು ತಮಿಳುನಾಡು ರಾಜಕೀಯದಲ್ಲಿ ಇದೇ ಮೊದಲೇನು ಅಲ್ಲ. ಈ ಹಿಂದೆ ಅಂದರೆ, 2009ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಎಂ. ಕರುಣಾನಿಧಿ ಇದ್ದರು; ಆಗ ಅವರ ಪುತ್ರ ಎಂ.ಕೆ ಸ್ಟಾಲಿನ್ ಅವರು ಮೊದಲ ಬಾರಿ ಉಪ ಮುಖ್ಯಮಂತ್ರಿಯಾಗಿದ್ದರು.