ವಾಷಿಂಗ್ಟನ್ : ಅಮೆರಿಕದಲ್ಲಿ ಭಾರತೀಯರ ಕಗ್ಗೊಲೆ ಮುಂದುವರೆದಿದೆ. ಅಮೆರಿಕದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಆರು ಮಂದಿ ಭಾರತೀಯ ಮೂಲದವರು ಅಸಹಜವಾಗಿ ಮೃತಪಟ್ಟಿದ್ದಾರೆ. ಈಗ ವಾಷಿಂಗ್ಟನ್‌ನ ಒಂದು ರೆಸ್ಟೊರೆಂಟ್‌ನ ಹೊರಗೆ ನಡೆದ ಜಗಳದಲ್ಲಿ ಮಾರಣಾಂತಿಕ ಗಾಯಗೊಂಡಿದ್ದ ಭಾರತೀಯ- ಅಮೆರಿಕನ್ ಎಕ್ಸಿಕ್ಯೂಟಿವ್ ಒಬ್ಬರು ಮೃತಪಟ್ಟಿದ್ದಾರೆ.
ಭಾರತೀಯ ಮೂಲದ, ವರ್ಜೀನಿಯಾದ ನಿವಾಸಿ ವಿವೇಕ್ ತನೇಜಾ ಮೃತಪಟ್ಟ ವ್ಯಕ್ತಿ. ಫೆಬ್ರವರಿ 2ರಂದು ವಿವೇಕ್ ಜಪಾನೀಸ್ ರೆಸ್ಟೋರೆಂಟ್‌ನಲ್ಲಿ ಇದ್ದರು. ಆರೋಪಿಯು ವಿವೇಕ್‌ನನ್ನು ನೆಲಕ್ಕೆ ಕೆಡವಿ ಅವರ ತಲೆಯನ್ನು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆಸಿ ಗಾಯಗೊಳಿಸಿದ್ದ, ಗಾಯಗೊಂಡಿದ್ದ ವಿವೇಕ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಶಂಕಿತನಿಗಾಗಿ ಶೋಧ ನಡೆಸಲಾಗುತ್ತಿದೆ. ಆತನ ಗುರುತು ಪತ್ತೆಯಾಗಿಲ್ಲ. ಆತನ ಬಂಧನ ಮತ್ತು ಶಿಕ್ಷೆಗೆ ಕಾರಣವಾಗುವ ಮಾಹಿತಿಯನ್ನು ಒದಗಿಸುವವರಿಗೆ ಪೊಲೀಸರು $25,000 ಬಹುಮಾನ ಘೋಷಿಸಿದ್ದಾರೆ. ಈ ವರ್ಷ ಅಮೆರಿಕದಲ್ಲಿ ಐವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಭಾರತೀಯ-ಅಮೆರಿಕನ್ ಸಮೀರ್ ಕಾಮತ್ ಶವವಾಗಿ ಪತ್ತೆಯಾಗಿದ್ದರು. ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದ 19 ವರ್ಷದ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನ್ನಿಗೇರ್ ಕಳೆದ ವಾರ ಶವವಾಗಿ ಪತ್ತೆಯಾಗಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ನೀಲ್ ಆಚಾರ್ಯ ಆ ವಾರದ ಆರಂಭದಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಹರಿಯಾಣದ 25 ವರ್ಷದ ವಿದ್ಯಾರ್ಥಿ ವಿವೇಕ್ ಸೈನಿ ಜನವರಿ 16ರಂದು ಜಾರ್ಜಿಯಾದ ಲಿಥೋನಿಯಾದಲ್ಲಿ ನಿರಾಶ್ರಿತ ವ್ಯಕ್ತಿಯಿಂದ ಹೊಡೆದು ಸಾಯಿಸಲ್ಪಟ್ಟರು. ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಅಕುಲ್ ಧವನ್ ಜನವರಿಯಲ್ಲಿ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದ ಹೊರಗೆ ಶವವಾಗಿ ಪತ್ತೆಯಾಗಿದ್ದರು. ಸಾವುಗಳ ಹಿನ್ನೆಲೆಯಲ್ಲಿ, ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ತಾಣವಾಗಿ ಉಳಿಯಲು ಯುಎಸ್ ಬದ್ಧವಾಗಿದೆ ಎಂದು ಭಾರತದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಭರವಸೆ ನೀಡಿದ್ದಾರೆ.