ನವದೆಹಲಿ: ”ಬಿಜೆಪಿ ಅಯೋಧ್ಯೆಯಲ್ಲಿ ಚುನಾವಣಾ ಸೋಲು ಕಾಣಲು ಕಾರಣ ಏನೆಂದು ಗೊತ್ತೆ? ಅವರು ಪ್ರಾಣಪ್ರತಿಷ್ಠಾಪನೆಗೆ ಒಬ್ಬ ರೈತನನ್ನು ಕೂಡ ಆಹ್ವಾನಿಸಲಿಲ್ಲ. ಬದಲಿಗೆ ಉದ್ಯಮಿಗಳು, ನಟ-ನಟಿಯರನ್ನು ಆಹ್ವಾನಿಸಿದ್ದರು. ಅವರೆಲ್ಲರೂ ಕುಣಿದು ಕುಪ್ಪಳಿಸಿದರು (ನಾಚ್ ಗಾನ)” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹರಿಯಾಣದಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ನಾಚ್ ಗಾನಕ್ಕೆ ಹೋಲಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷವು ಪದೇ ಪದೇ ಹಿಂದೂಗಳನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ” ಬಿಜೆಪಿ ರಾಮ ಮಂದಿರ ತೆರೆದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರವೇಶಿಸಲು ಬಿಡಲಿಲ್ಲ. ಆದಿವಾಸಿ ಹಿನ್ನೆಲೆಯವರು ಎಂದು ಮುರ್ಮು ಅವರನ್ನು ದೂರವಿಟ್ಟರು. ಮಂದಿರದಲ್ಲಿ ಒಬ್ಬ ರೈತನಿಗೆ ಆಹ್ವಾನ ನೀಡಲಿಲ್ಲ. ಕೇವಲ ನಟ-ನಟಿಯರು ಕುಣಿದಿದ್ದನ್ನು ಮಾಧ್ಯಮಗಳು ಚೆನ್ನಾಗಿ ಬಿತ್ತರಿಸಿದವು. ಇದು ವಾಸ್ತವ,” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಅವರು ಅಮಿತಾಬ್ ಬಚ್ಚನ್, ಅದಾನಿ, ಅಂಬಾನಿ ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಿದ್ದರು. ಅಲ್ಲಿ ಒಬ್ಬನಾದರೂ ರೈತ ಇದ್ದನಾ? ಅಥವಾ ಕಾರ್ಮಿಕನಿದ್ದನಾ? ಅಲ್ಲಿ ಬರೇ ನಾಚ್ ಗಾನ ಇತ್ತಷ್ಟೇ ಎಂದು ದೂರಿದರು.