ಲಕ್ನೋ: ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 121 ಜನರ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದ, ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ಭೋಲೇ ಬಾಬಾ ಎಂದು ಖ್ಯಾತಿ ಪಡೆದಿರುವ ಸೂರಜ್ ಪಾಲ್ ಜಾತವ್, “ಅವ್ಯವಸ್ಥೆ ಸೃಷ್ಟಿಸಿದವರನ್ನು ಕ್ಷಮಿಸುವುದಿಲ್ಲ” ಎಂದು ಶನಿವಾರ ಹೇಳಿದ್ದಾರೆ.
ಮೊದಲ ಬಾರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಾರಾಯಣ್ ಸಕರ್ ಹರಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ‘ಭೋಲೆ ಬಾಬಾ’, ಈ ವಾರದ ಆರಂಭದಲ್ಲಿ ಹತ್ರಾಸ್ ಜಿಲ್ಲೆಯ ಫುಲಾರಿ ಗ್ರಾಮದಲ್ಲಿ ನಡೆದ ‘ಸತ್ಸಂಗ’ದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಭೋಲೆ ಬಾಬಾ ” ಜುಲೈ 2ರ ಘಟನೆಯಿಂದ ನನಗೆ ಅತೀವ ದುಃಖವಾಗಿದೆ. ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ.. ದಯವಿಟ್ಟು ಸರ್ಕಾರ ಮತ್ತು ಆಡಳಿತದ ಮೇಲೆ ನಂಬಿಕೆ ಇಡಿ. ಅವ್ಯವಸ್ಥೆ ಸೃಷ್ಟಿಸಿದವರನ್ನು ಕ್ಷಮಿಸುವುದಿಲ್ಲ ಎಂಬ ನಂಬಿಕೆ ನನಗಿದೆ. ಸಮಿತಿಯ ಸದಸ್ಯರಿಗೆ ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳೊಂದಿಗೆ ನಿಲ್ಲುವಂತೆ ಮತ್ತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡುವಂತೆ ನನ್ನ ವಕೀಲ ಎಪಿ ಸಿಂಗ್ ಮೂಲಕ ವಿನಂತಿಸಿದ್ದೇನೆ” ಎಂದು ಹೇಳಿದ್ದಾರೆ.
ಪೊಲೀಸ್ ಎಫ್ಐಆರ್ ಪ್ರಕಾರ, ಸತ್ಸಂಗ ಕಾರ್ಯಕ್ರಮದಲ್ಲಿ ಕೇವಲ 80,000 ಜನಕ್ಕೆ ಅನುಮತಿ ನೀಡಿದ್ದರೂ ಸುಮಾರು 250,000 ಜನ ಜಮಾಯಿಸಿದ್ದರು. ಹತ್ರಾಸ್ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ್ದಾರೆ.
ಈ ನಡುವೆ , ಸಂಘಟಕ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಎಂದು ಗುರುತಿಸಲಾಗಿದ್ದು, ವಿಶೇಷ ತನಿಖಾ ತಂಡ(ಎಸ್ಐಟಿ), ವಿಶೇಷ ಕಾರ್ಯಪಡೆ(ಎಸ್ಟಿಎಫ್) ಮತ್ತು ಉತ್ತರ ಪ್ರದೇಶ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅವರ ವಕೀಲ ಎಪಿ ಸಿಂಗ್ ಶುಕ್ರವಾರ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು ದೇವಪ್ರಕಾಶ್ ಮಧುಕರ್ ಅವರನ್ನು ಬಂಧಿಸಲು ಸುಳಿವು ನೀಡುವುವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದರು. ಈ ಪ್ರಕರಣದಲ್ಲಿ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.
 
				 
         
         
         
															 
                     
                     
                     
                    


































 
    
    
        