ಹೊಸದಿಲ್ಲಿ : ಆಡಳಿತಾರೂಢ ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಜಾಹೀರಾತೊಂದು ವೈರಲ್ ಆಗಿದೆ. ಇಂಡಿಯಾ ಒಕ್ಕೂಟದ ನಾಯಕರನ್ನು ವಿಡಂಬಿಸುವ ಹಾಗೂ ಪ್ರಧಾನಿ ಖುರ್ಚಿಗಾಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವ ಜಾಹೀರಾತನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಜಾಹೀರಾತಿನಲ್ಲಿ ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಲಾಲು ಪುತ್ರ ತೇಜಸ್ವಿ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ವಿವಿಧ ನಾಯಕರನ್ನು ಚಿತ್ರಿಸುವ ಪಾತ್ರಗಳಿವೆ.
ಇಂಡಿಯಾ ಒಕ್ಕೂಟದ ನಾಯಕರು ಒಂದು ಕಡೆ ಸಭೆ ಸೇರಿ ಯಾರು ಮುಂದಿನ ಪ್ರಧಾನಿಯಾಗಬೇಕು ಎಂಬ ಚರ್ಚೆಗೆ ಬಂದಿರುತ್ತಾರೆ. ಈ ವೇಳೆ ದೆಹಲಿಯ ನಾಯಕ ಮದ್ಯದ ಹಗರಣದಲ್ಲಿ ಸಾಕಷ್ಟು ಗಳಿಸಿದ್ದಾನೆ. ಜನರ ಕಣ್ಣಿಗೆ ಮಣ್ಣೆರಿಚಿದ್ದಾರೆ. ಲಾಲು ಪುತ್ರ ಬಿಹಾರವನ್ನೇ ನುಂಗಿ ನೀರು ಕುಡಿದಿದ್ದಾನೆ ಎಂದು ಒಬ್ಬರಿಗೊಬ್ಬರು ಹಿಯ್ಯಾಳಿಸುತ್ತಾ ನಾನು ಪ್ರಧಾನಿ ನಾನು ಪ್ರಧಾನಿ ಎಂದು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಾರೆ.
ಕೊನೆಗೆ ಎಲ್ಲರೂ ಸೇರಿ ಪ್ರಧಾನಿ ಖುರ್ಚಿಯನ್ನೇ ಮುರಿದು ಹಾಕುತ್ತಾರೆ. ಬಳಿಕ ಎಲ್ಲ ನಾಯಕರು ಅಲ್ಲಿಂದ ಹೊರಟು ಹೋಗುತ್ತಾರೆ. ಇಂಡಿಯಾ ಒಕ್ಕೂಟದ ನಾಯಕರು ಪ್ರಧಾನಿ ಹುದ್ದೆಗೆ ಹೊಡೆದಾಡಿಕೊಳ್ಳುವ ಅಣಕು ಜಾಹೀರಾತನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.