ನವದೆಹಲಿ: ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಪಕ್ಷ ಮನವಿಕೊಂಡಿದೆ.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವುದೇ ವಿಷಯದಿಂದ ವಿಚಲಿತರಾಗದೇ ಮತದಾನ ಮಾಡಿ. ಇಂದು 4ನೇ ಹಂತದ ಮತದಾನ ನಡೆಯತ್ತಿದೆ. ಜೂನ್ 4ರಂದು ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆಯಾಗಲಿದೆ ಎಂಬುವುದನ್ನು 3 ಹಂತದ ಮತದಾನಗಳಿಂದ ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.
ನೀವು ನೀಡುವ ಒಂದು ಮತವು ನಿಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುತ್ತದೆ. ಜೊತೆಗೆ ನಿಮ್ಮ ಇಡೀ ಕುಟುಂಬದ ಭವಿಷ್ಯವನ್ನು ಬದಲಾಯಿಸುತ್ತದೆ ಎನ್ನುವುದು ನೆನಪಿರಲಿ ಎಂದಿದ್ದಾರೆ.
ಇನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮೊದಲ 3 ಹಂತಗಳಲ್ಲಿ ಪ್ರಜಾಪ್ರಭುತ್ವದ ಪರ ಮತ ಚಲಾಯಿಸುವ ಮೂಲಕ ಜನರು ನಿರಂಕುಶ ಶಕ್ತಿಗಳಿಂದ ಸಂವಿಧಾನವನ್ನು ಉಳಿಸಲು ತಮ್ಮ ಶಕ್ತಿ ತೋರಿಸಿದ್ದಾರೆ. ನ್ಯಾಯದ ಪರವಾಗಿ ಮತ ಚಲಾಯಿಸುವ ಮೂಲಕ ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸಿ. ಸಮಾಜವನ್ನು ವಿಭಜಿಸುವ ದ್ವೇಷಪೂರಿತ ಭಾಷಣಗಳ ದಿಕ್ಕು ತಪ್ಪಿಸುವ ತಂತ್ರಗಳಿಂದ ಹಿಂಜರಿಯಬೇಡಿ ಎಂದು ಹೇಳಿದ್ದಾರೆ.
				
															
                    
                    
                    
                    
                    
































