ಬೆಂಗಳೂರು: ರಾಜ್ಯದಲ್ಲಿ ದಿನಸಿ, ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಇದರಿಂದ ರಾಜ್ಯದ ಜನತೆ ಕಂಗೆಡುತ್ತಿದ್ದಾರೆ. ಇದೀಗಾ ಈ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರ್ಯಾಂಡ್ ಅಕ್ಕಿ ಇಂದಿನಿಂದ ಗ್ರಾಹಕರ ಕೈಗೆ ಸೇರಲಿದೆ.
ಇಂದು ಬೆಂಗಳೂರಿನಲ್ಲಿ 4 ಗಂಟೆಗೆ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಾಹನಗಳಿಗೆ ಚಾಲನೆ ದೊರೆಯಲಿದ್ದು, ಈ ಮೂಲಕ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ, ಭಾರತ್ ಬ್ರ್ಯಾಂಡ್’ ಅಡಿಯಲ್ಲಿ ಗೋಧಿ ಹಿಟ್ಟು ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಅಕ್ಕಿಯನ್ನೂ ಸೇರಿಸಲಾಗಿದ್ದು, ಪ್ರತಿ ಒಂದು ಕೆ.ಜಿ ಅಕ್ಕಿಗೆ ರೂ.29 ದರ ನಿಗದಿಪಡಿಸಲಾಗೆದೆ. ಭಾರತ್ ಬ್ರ್ಯಾಂಡ್ ಅಕ್ಕಿಯ 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್ ಗಳು ದೊರೆಯಲಿದೆ.
ಇನ್ನು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್) ಮತ್ತು ಕೇಂದ್ರೀಯ ಭಂಡಾರದ ಮಳಿಗೆಗಳಲ್ಲಿ ಮಾರಾಟಕ್ಕೆ ನಿರ್ಧರಿಸಲಾಗಿದ್ದು, ಇದರ ಜೊತೆಗೆ ರಿಲಯನ್ಸ್, ಫ್ಲಿಪ್ಕಾರ್ಟ್, ಬಿಗ್ ಬಾಸ್ಕೆಟ್ ಅಷ್ಟೇ ಅಲ್ಲದೆ ಆನ್ಲೈನ್ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.