ಈ ಬಾರಿ ಕನ್ನಡ ರಾಜ್ಯೋತ್ಸವದಲ್ಲಿ  ”ಕನ್ನಡ ಬೆಳಗಲಿ ಹಿಂದಿ ತೊಲಗಲಿ” ಘೋಷವಾಕ್ಯ ಮೊಳಗಲಿ.!

 

ಬೆಂಗಳೂರು: ಹಿಂದಿ ಏರಿಕೆ ವಿರೋಧಿ ಕರ್ನಾಟಕದ ಹೋರಾಟಗಾರರಿಂದ  ಫ್ರೀಡಂ ಪಾರ್ಕ್‌ ಕುವೆಂಪು ಪ್ರತಿಮೆ ಬಳಿ 69ನೇ ಕರ್ನಾಟಕ ರಾಜ್ಯೋತ್ಸವದ ಆಚರಣೆಯಲ್ಲಿ ‘ಕನ್ನಡ ಬೆಳಗಲಿ ಹಿಂದಿ ತೊಲಗಲಿ’ ಎಂಬ ಘೋಷವಾಕ್ಯದೊಂದಿಗೆ ಭೀತಿ ಪತ್ರವನ್ನು ಅನಾವರಣಗೊಳಿಸಲಾಯಿತು.

ಕರ್ನಾಟಕ ರಾಜ್ಯೋತ್ಸವದ ಆಚರಣೆಯು ಕೇವಲ ಸಂಭ್ರಮಾಚರಣೆಯಾಗಿ ಮುಗಿದುಹೋಗುವ ಬದಲಾಗಿ, ಕನ್ನಡಿಗರಲ್ಲಿ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ರೀತಿಯಲ್ಲಿ ಆಚರಣೆಗೆ ಬರಲಿ ಎಂಬ ಎಂಬ ಆಶಯದೊಂದಿಗೆ ಕನ್ನಡಪರ ಸಂಘಟನೆಗಳು, ದಲಿತ, ರೈತ, ಪ್ರಗತಿಪರ ಚಳುವಳಿಗಳ ಹೋರಾಟಗಾರರು . ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

ಜಾಣಗೆರೆ ವೆಂಕಟರಾಮಯ್ಯನವರು ‘ಕನ್ನಡ ಬೆಳಗಲಿ ಹಿಂದಿ ತೊಲಗಲಿ’ ಎಂಬ ಘೋಷ ವಾಕ್ಯದ ಟಿ-ಶರ್ಟ್ ಅನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಹಿಂದಿ ಹೇರಿಕೆಯು ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನಾವೆಲ್ಲರೂ ಒಕ್ಕೂರಲಿನಿಂದ ಇದನ್ನು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಹಾಗೂ ಕನ್ನಡ ಚಳುವಳಿಯ ಹಿರಿಯ ನಾಯಕರಾದ ಸಾ.ರಾ.ಗೋವಿಂದು ರವರು ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದರು. ಕರ್ನಾಟಕದಲ್ಲಿ ಹಿಂದಿ ಭಾಷೆಯ ಹೇರಿಕೆಯ ಜೊತೆಯಲ್ಲಿ ಉತ್ತರ ಭಾರತದ ಹಿಂದಿ ಭಾಷಿಕರ ವಲಸೆಯು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದಿ ಹೇರಿಕೆ ವಿರೋಧಿ ಕರ್ನಾಟಕದ ಸಂಚಾಲಕರಾದ ಪಾರ್ವತೀಶ್ ಬಿಳಿದಾಳೆಯವರು. ಕನ್ನಡ ರಾಜ್ಯೋತ್ಸವ ಆಚರಣೆಯು ಕೇವಲ ಸಂಭ್ರಮಾಚರಣೆಯಾಗಿ ಮುಗಿದು ಹೋಗದೆ, ನಾಡು ನುಡಿಯ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಆಚರಣೆಯಾಗಿ ಮುಂದುವರೆಯಲಿ ಎಂಬುದಾಗಿ ಆಶಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮುಖಂಡರಾದ ಮಾವಳ್ಳಿ ಶಂಕರ್ ಅವರು ಮಾತನಾಡಿ, ನಮ್ಮೆಲ್ಲರ ತಾಯಿನುಡಿ ಕನ್ನಡವಾಗಿದ್ದು ಅದರ ಕತ್ತು ಹಿಸುಕುವ ಯಾವುದೇ ಪ್ರಯತ್ನವನ್ನು ನಾವು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂಬುದಾಗಿ ಹೇಳಿದರು. ಡಾ||ಕಾ.ವೆಂ. ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಹಕ್ಕು, ಸ್ಥಾನ ಕುಗ್ಗಿಸಿದಲ್ಲಿ ಪರಿಣಾಮ ಸರಿಯಾಗದೆಂದು ಕೇಂದ್ರ ಸರ್ಕಾರವನ್ನು ಅವರು ಎಚ್ಚರಿಸಿದರು.

ಕನ್ನಡ ಚಳುವಳಿಯ ಮುಖಂಡರಾದ ಶೆ.ಬೊ.ರಾಧಾಕೃಷ್ಣ, ಜಯ ಕರ್ನಾಟಕ ಸಂಘಟನೆಯ ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಮತ್ತು ಅವರ ಬಳಗ, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ, ಕನ್ನಡ ಸಂಘರ್ಷ ಸಮಿತಿಯ ನಾಗರಾಜ ಸ್ವಾಮಿಯವರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಲೋಹಿಯಾ ವಿಚಾರ ವೇದಿಕೆಯ ಆಲಿಬಾಬ, ರಾಷ್ಟ್ರೀಯ ದ್ರಾವಿಡ ಸಂಘಟನೆಯ ಅಭಿ ಗೌಡ, ಸಿನಿಮಾ ನಿರ್ದೇಶಕ ಮೆ.ಹು.ಪ್ರಕಾಶ್, ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾ.ಸಿ.ತಿಮ್ಮಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಎಲ್ಲೆಡೆ ಈ ಬಾರಿಯ ರಾಜ್ಯೋತ್ಸವ ಆಚರಣೆಯನ್ನು ‘ಕನ್ನಡ ಬೆಳಗಲಿ ಹಿಂದಿ ತೊಲಗಲಿ’ ಎಂಬ ಘೋಷ ವಾಕ್ಯವನ್ನು ಅಳವಡಿಸಿಕೊಳ್ಳುವುದರ ಮೂಲಕ ಆಚರಿಸಬೇಕೆಂದು ಎಲ್ಲಾ ಸಂಘಟನೆಗಳ ಮುಖಂಡರು ಕನ್ನಡ ಜನತೆಯಲ್ಲಿ ಮನವಿಮಾಡಲಾಯಿತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement