ಬೆಂಗಳೂರು: ಲೋಕಾಯುಕ್ತ ADGP ಚಂದ್ರಶೇಖರ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮತ್ತೆ ಕಿಡಿ ಕಾರಿದ್ದಾರೆ. ಕಳಂಕಿತ ಅಧಿಕಾರಿ ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೂ ಕೆಲಸ ಮಾಡಿರಲಿಲ್ಲವೆ? ಎಂದು ಕೇಳಿದ್ದ ಕೆಲ ಸಚಿವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ಅಪ್ರಬುದ್ಧ ಅವಿವೇಕಿಗಳಿಗೆ ಏನು ಹೇಳುವುದು? ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಹುದ್ದೆಯಲ್ಲಿರುವ ಕಳಂಕಿತ, ಕ್ರಿಮಿನಲ್ ಪ್ರವೃತ್ತಿಯ ಅಧಿಕಾರಿ ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿಯೂ ಕೆಲಸ ಮಾಡಿರಲಿಲ್ಲವೇ? ಎನ್ನುವುದು ಈ ಸರಕಾರದಲ್ಲಿರುವ ಕೆಲವರ ಪ್ರಶ್ನೆ. ನನ್ನ ಸರಕಾರದಲ್ಲಿಯೂ ಈ ಅಧಿಕಾರಿ ಕೆಲಸ ಮಾಡಿದ್ದರು, ನಿಜ. ನಾನು ಇಲ್ಲವೆನ್ನುವುದಿಲ್ಲ. ಆದರೆ; ಊರು ಮೇಯೋಕೆ, ಸಿಕ್ಕಸಿಕ್ಕ ಕೊಚ್ಚೆಯಲ್ಲಿ ಉರುಳಾಡೋಕೆ, ಹೆದರಿಸಿ ಬೆದರಿಸಿ ಸುಲಿಗೆ ಮಾಡೋಕೆ ನಾನು ಬಿಟ್ಟಿರಲಿಲ್ಲ. ಹದ್ದುಬಸ್ತಿನಲ್ಲಿ ಇಟ್ಟು ಕೆಲಸ ಮಾಡಿಸಿದ್ದೆ. ನಿಮಗೆ ಅಂತಹ ಎದೆಗಾರಿಕೆ ಇದೆಯಾ ಕಾಂಗ್ರೆಸ್ ಸಚಿವರೇ? ಎಂದು ಪ್ರಶ್ನಿಸಿದ್ದಾರೆ ಕೇಂದ್ರ ಸಚಿವರು. ಕಳಂಕಿತ ಅಧಿಕಾರಿಗಳಿಂದ ರಕ್ಷಣೆ ಪಡೆದುಕೊಳ್ಳುವ ನಿಮ್ಮ ನಿಕೃಷ್ಟ ಸ್ಥಿತಿ ನನಗೆ ಬಂದಿಲ್ಲ, ಬರುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
