ಬೆಂಗಳೂರು : ಬೆಂಗಳೂರು ಮತ್ತು ಗಡಿ ಜಿಲ್ಲೆಗಳಲ್ಲಿ ಸ್ಥಳೀಯ ಭಾಷೆ ಕನ್ನಡದ ವಿಷಯವಾಗಿ ನಡೆಯುವ ಘರ್ಷಣೆಗಳು ಹೊಸದಲ್ಲ. ಭಾಷಾ ಅಸಮಾಧಾನದಿಂದ ಜಗಳಗಳು ಉಂಟಾಗಿರುವ ಘಟನೆಗಳು ಅನೇಕ ಬಾರಿ ಬೆಳಕಿಗೆ ಬಂದಿವೆ. ಇಂತಹ ಘಟನೆಯಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ದೆಹಲಿ ಮೂಲದ ಸಿಮ್ರಿಧಿ ಮಖಿಜಾ ಎಂಬ ಯುವತಿ ಕನ್ನಡ ಭಾಷೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದು ಈಗ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಕಂಟೆಂಟ್ ಕ್ರಿಯೇಟರ್ ಆದ ಮಖಿಜಾ, ಎರಡು ತಿಂಗಳಿಗಿಂತ ಹೆಚ್ಚು ಕಾಲ ಬೆಂಗಳೂರಿನಲ್ಲಿ ವಾಸಿಸಿದ ನಂತರ ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಕನ್ನಡ ಬರದಿದ್ದರೆ ಬೆಂಗಳೂರಿಗೆ ಬರಬೇಡಿ’ ಎಂಬ ಮಾತುಗಳನ್ನು ಪ್ರಾರಂಭದಲ್ಲಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಅವರು ಹೇಳುತ್ತಾರೆ. “ನಾನು ದೆಹಲಿ ಹುಡುಗಿ, ಕನ್ನಡ ಕಲಿಯುವುದೇಕೆ?” ಎಂಬ ಭಾವನೆಯಾಗಿದ್ದರೂ, ಬೆಂಗಳೂರಿನಲ್ಲಿ 60 ದಿನಗಳ ಕಾಲ ಕಳೆದ ನಂತರ ಕನ್ನಡ ಕಲಿಯುವುದು ಜೀವನವನ್ನು ಸುಲಭಗೊಳಿಸುತ್ತದೆ ಎಂಬುದು ಅವರಿಗೆ ಅರಿವಾಯಿತು ಎಂದು ತಿಳಿಸಿದ್ದಾರೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸಿಸುತ್ತಿರುವ ಅವರು, ಅಲ್ಲಿ ಪ್ರತಿದಿನ ಹೋಗುತ್ತಿದ್ದ ಸ್ಥಳೀಯ ಹೊಟೇಲ್‌ನೊಂದಿಗಿನ ಅನುಭವವನ್ನೂ ಹಂಚಿಕೊಂಡಿದ್ದಾರೆ. ನಾಲ್ಕು ದಿನಗಳು ಕಾಣದಿದ್ದಾಗ ಹೊಟೇಲ್‌ನೊಬ್ಬ ಸಿಬ್ಬಂದಿ ‘ಏಕೆ ಬರಲಿಲ್ಲ?’ ಎಂದು ಆತ್ಮೀಯವಾಗಿ ವಿಚಾರಿಸಿದ್ದನ್ನು ಅವರು ಉದಾಹರಣೆಯಾಗಿ ವಿವರಿಸುತ್ತಾರೆ. “ಸ್ಥಳೀಯರೊಂದಿಗೆ ಮಾತನಾಡಲು ಕನ್ನಡ ಬಳಸಿದಾಗ, ಆತ್ಮೀಯತೆ ಹೆಚ್ಚುತ್ತದೆ. ಅದನ್ನು ನಾನು ಸ್ವತಃ ಅನುಭವಿಸಿದ್ದೇನೆ,” ಎಂದು ಅವರು ಹೇಳುತ್ತಾರೆ.
ಮಖಿಜಾ ಕನ್ನಡವನ್ನು ಕಲಿಯುವುದರ ಹಿಂದೆ ಇರುವ ಉದ್ದೇಶವನ್ನು ವಿವರಿಸುತ್ತಾ, “ಈ ನಗರದಲ್ಲಿ ನೆಲೆಸುವುದಾದರೆ, ಕನಿಷ್ಠ ಸ್ವಲ್ಪ ಕನ್ನಡವಾದರೂ ಮಾತಾಡಲು ಬಲ್ಲದ್ದು ಅತ್ಯಂತ ಅಗತ್ಯ. ಅದು ಗೌರವ ಸೂಚಿಸುವ ಮೂಲಭೂತ ಅಂಶ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಕನ್ನಡ ಸುಲಭವಾಗಿ ಮಾತನಾಡಬಲ್ಲ ನನ್ನ ಸ್ನೇಹಿತರ ಬಗ್ಗೆ ನನಗೆ ಅಸೂಯೆ ಇದೆ. ನಾನು ಸಹ ಕಲಿಯಲು ಅವರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೇನೆ,” ಎಂದೂ ಅವರು ಹೇಳಿದ್ದಾರೆ.
ಸಿಮ್ರಿಧಿ ಮಖಿಜಾ ಅವರ ಈ ವೀಡಿಯೋ ಈಗ 1.1 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸ್ಥಳೀಯ ಭಾಷೆಯನ್ನು ಕಲಿಯುವುದು ಸ್ಥಳ ಸಂಸ್ಕೃತಿಗೆ ಗೌರವ ಸೂಚಿಸುವ ಪ್ರಮುಖ ಅಂಶ ಎಂದು ಹಲವರು ಅಭಿನಂದಿಸಿದ್ದಾರೆ.






























