ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಹೊರಡಿಸಿದ ಆದೇಶಕ್ಕೆ ವಿಧಿಸಿರುವ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮತ್ತೆ ವಿಸ್ತರಿಸಿದೆ. ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಇರುವ ನ್ಯಾಯಪೀಠ ಜು.22ರಂದು ವಿಚಾರಣೆ ನಡೆಸಿ ಮಧ್ಯಂತರ ತಡೆ ನೀಡಿತ್ತು. ಶುಕ್ರವಾರ ಮತ್ತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ಈ ಹಿಂದೆ ಹೇಳಿದಂತೆ ವ್ಯಾಪಾರಿಗಳನ್ನು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ. ಅಲ್ಲದೇ ಮಧ್ಯಂತರ ತಡೆಯನ್ನು ಮತ್ತೆ ವಿಸ್ತರಿಸಿದೆ. ಇದರ ಜೊತೆಗೆಳೆ ಪವಿತ್ರ ಯಾತ್ರೆಯಾಗಿರುವ ಕನ್ವರ್ ಯಾತ್ರೆ ಸುಗಮವಾಗಿ, ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ಸಾಗಲಿ ಎಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿತು. ಆದರೆ ಕೋರ್ಟ್, ವ್ಯಾಪಾರಿಗಳ ಮೇಲೆ ಒತ್ತಡ ಹೇರಲು, ಒತ್ತಾಯಿಸಲು ಸಾಧ್ಯವಿಲ್ಲ. ಅವರು ಬಯಸಿದ್ದಲ್ಲಿ ಯಾವ ತರಹದ ಆಹಾರ ಅವರ ಅಂಗಡಿಗಳಲ್ಲಿ ಸಿಗುತ್ತದೆ ಎಂಬುದನ್ನು ಬೋರ್ಡ್‌ನಲ್ಲಿ ಪ್ರಕಟಿಸಬಹುದು ಎಂದಿದೆ.