ಕೋಲಾರ : ಅಪ್ರಾಪ್ತ ವಯಸ್ಸಿನ ಯುವತಿ ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಕೋಲಾರದ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ನೋಡಿ ಕಾಲೇಜು ಉಪನ್ಯಾಸಕರು, ಸಹಪಾಠಿಗಳು ದಂಗಾಗಿದ್ದಾರೆ.
ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಮಗು ಕರುಣಿಸಿದ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೋಲಾರದಲ್ಲಿ ಕಳೆದ ವರ್ಷ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ಬಾಲಕಿ ಕಾಲೇಜಿನ ಶೌಚಾಲಯದಲ್ಲಿ ಮಗುವನ್ನು ಸಾಯಿಸಿ ಅದರೊಳಗೆ ಹಾಕಿ ಘಟನೆ ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಳು. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಮಗುವಿನ ಕತ್ತು ಹಿಸುಕಿ ಸಾಯಿಸಿ ಶೌಚಾಲಯದೊಳಗೆ ತುರುಕಿ ನಂತರ ತಾಯಿಯನ್ನು ಕರೆಸುವಂತೆ ಉಪನ್ಯಾಸಕರಿಗೆ ಹೇಳಿದ್ದಳು. ಸ್ವಚ್ಛತಾ ಸಿಬ್ಬಂದಿ ಶೌಚಾಲಯ ಸ್ವಚ್ಛಗೊಳಿಸಲು ಹೋದಾಗ ಮಗುವಿರುವುದು ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಬಾಲಕಿ ತಾನೇ ಮಗುವನ್ನು ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಳು.