ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದಕ್ಕೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದಕ್ಕೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಸಿಎಂ ಕಬಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ವಂತಕ್ಕಾಗಿ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೂ 1,200 ಕೋಟಿ ರೂ.ಗೂ ಅಧಿಕ ಹಣ ಬಂದಿದೆ. ಆ ಹಣವನ್ನು ಮೊದಲು ವಾಪಸ್ ನೀಡಲಿ, ಆ ನಂತರ ಸಚಿವರ ರಾಜೀನಾಮೆ ಕೇಳಲಿ ಎಂದರು. ಎಲ್ಲ ಪಕ್ಷಗಳು ದೇಣಿಗೆ ಸಂಗ್ರಹ ಮಾಡಿವೆ. ಹೀಗೆ ಹಣ ತೆಗೆದುಕೊಂಡವರ ಮೇಲೆ ಎಫ್ಐಆರ್ ದಾಖಲಿಸುವುದಾದರೆ, ಎಲ್ಲರ ಮೇಲೂ ದಾಖಲಿಸಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರೇ ಯಾರಿಂದಲೋ ಹೇಳಿಸಿ ದೂರು ದಾಖಲಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗೆ ದೂರು ದಾಖಲಿಸಿರುವುದು ರಾಜಕೀಯ ಪ್ರೇರಿತ ಎಂದರು. ಸಿಎಂ ಸಿದ್ದರಾಮಯ್ಯನವರ ಪ್ರಕರಣ ಕ್ಯಾಬೆನೆಟ್ನಲ್ಲಿ ಚರ್ಚೆಯಾಗಿರಲಿಲ್ಲ. ಆದರೆ ಚುನಾವಣಾ ಬಾಂಡ್ ಬಗ್ಗೆ ಕ್ಯಾಬಿನೆಟ್ನಲ್ಲೇ ಚರ್ಚೆಯಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಮುಡಾ ಹಗರಣದ ಆರೋಪದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹೀಗೆ ಮಾತಾಡುತ್ತಿದ್ದಾರೆ ಎಂದರು.
