ಗಣೇಶನಿಗೆ ಗರಿಕೆ ಹುಲ್ಲನ್ನು ಯಾಕೆ ಅರ್ಪಿಸುತ್ತಾರೆ ಗೊತ್ತಾ? – ಪುರಾಣದಲ್ಲಿರೋ ಉಲ್ಲೇಖ ಏನು?ಗರಿಕೆಯನ್ನು ಹೇಗೆ ಅರ್ಪಿಸಬೇಕು? ಇಲ್ಲಿದೆ ಎಲ್ಲದಕ್ಕೂ ಉತ್ತರ…

WhatsApp
Telegram
Facebook
Twitter
LinkedIn

ಹಿಂದೂ ಧರ್ಮದಲ್ಲಿ ಪವಿತ್ರವಾದ ಗಿಡಗಳಲ್ಲಿ ತುಳಸಿಯು ಮೊದಲ ಸ್ಥಾನದಲ್ಲಿದ್ದರೆ, ಗರಿಕೆಯು ಎರಡನೇ ಸ್ಥಾನದಲ್ಲಿದೆ. ಗರಿಕೆಯಿಲ್ಲದೇ ಯಾವ ಪೂಜೆಯೂ ಹಿಂದೂ ಧರ್ಮದಲ್ಲಿ ಸಂಪೂರ್ಣವಾಗದು. ಪ್ರಥಮ ಪೂಜಿತನಾದ ಗಣೇಶನಿಗೆ ಗರಿಕೆ ಅತ್ಯಂತ ಪ್ರಿಯವೂ ಹೌದು. ಪೂಜೆಯಲ್ಲಿಯೂ ಪ್ರಾಶಸ್ತ್ಯ ಪಡೆದಿರುವ ಗರಿಕೆಯನ್ನು ದುರ್ವಾ ಎಂದೂ ಕರೆಯುತ್ತಾರೆ.

ಪಾವಿತ್ರ್ಯವನ್ನು ಪಡೆದಿರುವ ಗರಿಕೆಯು ಮೂರು ಚೂಪಾದ ಎಳೆಗಳ ಆಕಾರವನ್ನು ಹೊಂದಿದ್ದು ಇದು ಶಿವನ ಮೂರು ತತ್ವಗಳನ್ನು ಪ್ರತಿನಿಧಿಸುತ್ತದೆ. ಅಂದರೆ ಮೂರು ದೇವ ತತ್ವಗಳಾದ ಶಿವ, ಶಕ್ತಿ ಹಾಗೂ ಗಣೇಶನನ್ನು ಪ್ರತಿಬಿಂಬಿಸುತ್ತದೆ.

ಗಣಪನಿಗೆ ಪ್ರಿಯ ಈ ಗರಿಕೆ

ಗಣೇಶನನ್ನು ಆಕರ್ಷಿಸುವಂತಹ ಸಾಮರ್ಥ್ಯವನ್ನು ಹೊಂದಿರುವ ಗರಿಕೆ ಹುಲ್ಲನ್ನು ಗಣೇಶನಿಗೆ ಪ್ರಮುಖವಾಗಿ ಅರ್ಪಿಸಲಾಗುತ್ತದೆ. ಗರಿಕೆಯ ಎಳಸು ಚಿಗುರುಗಳನ್ನು ದೇವತಾ ಕಾರ್ಯದಲ್ಲಿ ಬಳಸಲಾಗುತ್ತದೆ. ಈ ಚಿಗುರುಗಳು ತಮ್ಮ ಎಲೆಗಳ ಮೇಲೆ ಬಿದ್ದ ಇಬ್ಬನಿಗಳಲ್ಲಿರುವ ದೇವತೆಗಳ ತತ್ವವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಹಾಗಾಗಿ ಇದನ್ನು ಪೂಜೆಯಲ್ಲಿ ಬಳಸುವ ಆರಾಧಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಒಂದು ವೇಳೆ ಗರಿಕೆಯು ಹೂವನ್ನು ಬಿಟ್ಟರೆ ಅಂತಹ ಗರಿಕೆಯನ್ನು ಪೂಜೆಗೆ ಬಳಸಲಾಗುವುದಿಲ್ಲ. ಯಾಕೆಂದರೆ ಹೂಬಿಡುವ ಸಸ್ಯವು ಪಕ್ಷತೆಯನ್ನು ಸೂಚಿಸುತ್ತದೆ. ಮಾಗುವ ಕಾರಣ ಸಸ್ಯದ ಚೈತನ್ಯ ಕಡಿಮೆಯಾಗುತ್ತದೆ. ಇದು ದೇವತಾ ತತ್ವದ ಆವರ್ತನಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ.

ಗರಿಕೆಯ ಹಿಂದಿದೆ ಕಥೆ

ಒಮ್ಮೆ ಅನಲಾಸುರನೆಂಬ ರಾಕ್ಷಸನು ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದನು. ತನ್ನ ದಾರಿಯಲ್ಲಿ ಎದುರಾಗುವ ಎಲ್ಲರನ್ನೂ ಕಣ್ಣಿನಿಂದ ಬರುವ ಬೆಂಕಿಯಿಂದ ಸುಟ್ಟುಹಾಕುತ್ತಿದ್ದನು. ಆಗ ದೇವತೆಗಳು ಗಣೇಶನ ಸಹಾಯದ ಮೊರೆ ಹೋದರು. ಗಣೇಶ ಹಾಗೂ ಅನಲಾಸುರನ ಮಧ್ಯೆ ಯುದ್ಧ ನಡೆದಾಗ, ಅನಲಾಸುರನು ಬೆಂಕಿಯುಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ.

ಆಗ ಕೋಪದಿಂದ ಗಣೇಶನು ಅಸುರನನ್ನು ಸಂಹಾರ ಮಾಡಲು ವಿರಾಟ್‌ ರೂಪ ತಾಳಿ ಅನಲಾಸುರನನ್ನು ನುಂಗಿ ಬಿಡುತ್ತಾನೆ. ಇದರಿಂದಾಗಿ ಗಣೇಶನ ದೇಹದಲ್ಲಿ ಉಷ್ಣಾಂಶವು ಅಧಿಕವಾಗಿ ಹೊಟ್ಟೆ ಊದಿಕೊಂಡು ಬಿಡುತ್ತದೆ. ದೇಹದ ಉಷ್ಣಾಂಶದಿಂದ ದೇಹಾಲಸ್ಯದಿಂದ ಸುಧಾರಿಸಕೊಳ್ಳುವುದಕ್ಕೆ ಗಣೇಶನು ಹರಸಾಹಸ ಪಡುತ್ತಿದ್ದನು.

ದೇವತೆಗಳಾದ ಚಂದ್ರ, ವಿಷ್ಣು, ಶಿವ ಗಣೇಶನ ನೋವು ಕಡಿಮೆ ಮಾಡಲು ನಾನಾ ಉಪಾಯಗಳನ್ನು ಮಾಡಿದರೂ ಗಣೇಶನಿಗೆ ಹೊಟ್ಟೆನೋವು ಕಡಿಮೆಯಾಗಲಿಲ್ಲ. ಕೊನೆಗೆ ಋಷಿಮುನಿಗಳು 21 ಗರಿಕೆಯನ್ನು ಗಣೇಶನ ತಲೆಯ ಮೇಲಿಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಆವಿಯಾಗಿ ನೋವು ಕಡಿಮೆಯಾಗಿ, ಗಣೇಶನು ಗುಣಮುಖನಾಗುತ್ತಾನೆ. ಅಂದಿನಿಂದ ‘ಯಾರು ನನಗೆ ಗರಿಕೆಯಿಂದ ಅರ್ಚಿಸುತ್ತಾರೋ ಅವರ ಮೇಲೆ ಸದಾ ನನ್ನ ಆಶೀರ್ವಾದವಿರುತ್ತದೆ’ ಎಂದು ಗಣೇಶನು ಹೇಳಿದನು. ಹಾಗಾಗಿ ಗಣೇಶನಿಗೆ ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂಬ ನಂಬಿಕೆ ಬೆಳೆದು ಬಂದಿದೆ.

ಹೇಗೆ ಅರ್ಪಿಸಬೇಕು?

ಗರಿಕೆಯನ್ನು ಗಣೇಶನಿಗೆ ಅರ್ಪಿಸುವಾಗ ಮೂರು ಅಥವಾ ಐದು ಎಳೆಯನ್ನು ಹೊಂದಿರಬೇಕು. ಗರಿಕೆಯ ಮಧ್ಯದ ಎಸಳು ಗಣೇಶನನ್ನು ಆಕರ್ಷಿಸಿದರೆ, ಇತರ ಎರಡು ಎಸಳು ಶಿವ ಹಾಗೂ ಶಕ್ತಿಯನ್ನು ಆಕರ್ಷಿಸುತ್ತದೆ. ಗಣೇಶನಿಗೆ 21 ಗರಿಕೆಯನ್ನು ನೀಡುವುದು ಕಡ್ಡಾಯ. ಈ 21 ಗರಿಕೆಯನ್ನು ಕಟ್ಟಿ, ನೀರಿನಲ್ಲಿ ಅದ್ದಿದ ನಂತರ ಗಣೇಶನಿಗೆ ಅರ್ಪಿಸಬೇಕು. ಗಣೇಶನನ್ನು ಗರಿಕೆಯಿಂದ ಅಲಂಕರಿಸುವಾಗ ಮುಖವನ್ನು ಹೊರತುಪಡಿಸಿ, ಇತರ ಭಾಗವನ್ನು ಗರಿಕೆಯಿಂದ ಮುಚ್ಚಬೇಕು. ಮೊದಲು ಪಾದವನ್ನು ಮುಚ್ಚಿ ನಂತರ ಇತರ ಭಾಗವನ್ನು ಗರಿಕೆಯಿಂದ ಅಲಂಕರಿಸುತ್ತಾ ಬರಬೇಕು.

ಇನ್ನು ದೇವತಾ ವಿಗ್ರಹಗಳ ಪವಿತ್ರವಾದ ಪಾದವು ಹೆಚ್ಚಿನ ಪ್ರಮಾಣದ ದೇವತಾ ತತ್ವವನ್ನು ಹೊರಸೂಸುವುದರಿಂದ, ಆರಂಭದಲ್ಲೇ ಪಾದಗಳಿಗೆ ಗರಿಕೆಯನ್ನು ಅರ್ಪಿಸುವುದರಿಂದ ಹೆಚ್ಚಿನ ಗಣೇಶ ತತ್ವವನ್ನು ಆಕರ್ಷಿಸುತ್ತದೆ. ಈ ತತ್ವವು ಗರಿಕೆಗೆ ವರ್ಗಾವಣೆಯಾಗುತ್ತದೆ. ಗರಿಕೆಯಲ್ಲಿ ಸೇರುವ ಗಣೇಶನ ನಿರ್ಗುಣ ಆವರ್ತನಗಳು ವಿಗ್ರಹದಲ್ಲಿ ಆಕರ್ಷಿತವಾಗಿ, ನಂತರ ವಿಗ್ರಹದಲ್ಲಿ ಸಗುಣ ಆವರ್ತನವಾಗಿ ಪರಿವರ್ತನೆಯಾಗುತ್ತದೆ. ನಂತರ ಅವು ವಿಗ್ರಹದ ಮೂಲಕ ಹೊರಸೂಸುತ್ತದೆ.

ಹೀಗಾಗಿ ಗಣೇಶ ವಿಗ್ರಹವನ್ನು ಆರಾಧಿಸುವ ಆರಾಧಕನಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಗರಿಕೆಯ ಮೂಲಕ ದೇವತಾ ತತ್ವಗಳು ಹೊರಸೂಸುವುದರಿಂದಾಗಿ ಸುತ್ತಮುತ್ತಲೂ ರಜೋ ಹಾಗೂ ತಮೋ ಗುಣಗಳ ಪ್ರತಿಕೂಲ ಪ್ರಭಾವ ಕಡಿಮೆಯಾಗುತ್ತದೆ. ನಕಾರಾತ್ಮಕ ಶಕ್ತಿಗಳಿಂದ ಬಳಲುತ್ತಿರುವ ವ್ಯಕ್ತಿಯು ಈ ಗರಿಕೆಯ ಸಂಪರ್ಕಕ್ಕೆ ಬಂದಾಗ ಹೆಚ್ಚು ಧನಾತ್ಮಕ ಕಂಪನ ಹಾಗೂ ಒತ್ತಡಗಳು ನಿವಾರಣೆಯಾಗುವುದು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon