ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, ಜುಲೈ ತಿಂಗಳ ಗೃಹಜ್ಯೋತಿ ಸೌಲಭ್ಯ ಪಡೆಯಲು ಇದೇ ತಿಂಗಳ 25 ಮತ್ತು 26ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂತಹ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ಮೊದಲ ವಾರದಲ್ಲಿ ಬಿಲ್ ಶೂನ್ಯ ಬರಲಿದೆ ಎಂದರು.
ಗೃಹ ಜ್ಯೋತಿ ಯೋಜನೆಗಾಗಿ ಎರಡು ತಿಂಗಳ ಬಳಿಕ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಅದಾಲತ್ ಆಯೋಜಿಸಲಾಗುತ್ತದೆ. ಎಲ್ಲ ಅರ್ಹರಿಗೂ ಸೌಲಭ್ಯ ಕಲ್ಪಿಸಿಕೊಡುವಂತ ಕೆಲಸ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಗೃಹಜ್ಯೋತಿಗೆ 2.16 ಕೋಟಿ ಫಲಾನುಭವಿಗಳಿದ್ದು, ಅವರಿಗೆ 200 ಯೂನಿಟ್ ಉಚಿತ ವಿದ್ಯುತ್ ಸರಕಾರ ಘೋಷಿಸಲಾಗಿತ್ತು. ಈಗ ವಾರ್ಷಿಕ ಸರಾಸರಿ ಬಳಕೆ ಪ್ರಮಾಣದ ಮೇಲೆ ಶೇಕಡ 10ರಷ್ಟು ಉಚಿತ ಎನ್ನುವುದು ಎಷ್ಟು ಸರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.