ಬಳ್ಳಾರಿ : ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದು, ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಈ ವಾರವೇ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಶೇ.98 ರಷ್ಟು ಮಹಿಳೆಯರು ನೋಂದಾಯಿಸಿಕೊಂಡಿದ್ದು, ಇಲ್ಲಿಯವರೆಗೆ ಎಲ್ಲಾ ತಿಂಗಳ ಹಣ ಜಮೆಯಾಗುತ್ತಿದೆ. ಜೂನ್ ತಿಂಗಳ ಹಣವು ವಾರದಲ್ಲಿಯೇ ತಮ್ಮ ಖಾತೆಗಳಿಗೆ ಜಮೆಯಾಗಲಿದೆ. ಪ್ರಸ್ತಕ ತಿಂಗಳಿನ ಹಣವು ತದನಂತರ ಪಾವತಿಯಾಗಲಿದ್ದು, ಎಲ್ಲಾ ಮಹಿಳೆಯರಿಗೂ ತಲುಪಲಿದೆ ಎಂದರು.
ರಾಜ್ಯ ಸರ್ಕಾರವು ಸಮಾಜದ ಅಭಿವೃದ್ಧಿಗೆ ಬದ್ಧವಾಗಿದ್ದು, ಅದರಲ್ಲೂ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣವಾಗುತ್ತಿದೆ. ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ಮಹಿಳೆಯು ಮನೆಯ ಯಜಮಾನಿಯಾಗಿದ್ದಾಳೆ. ಇದರ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಅವರು ನುಡಿದರು.