ನವದೆಹಲಿ: ಗೋರಿಪಾಳ್ಯ ಪಾಕಿಸ್ತಾನದಲ್ಲಿದೆಯೇ ಎಂಬ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರ ಹೇಳಿಕೆ ವಿಚಾರವಾಗಿ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದ್ದು, ಭಾರತದ ಯಾವುದೇ ಭಾಗವನ್ನೂ ಪಾಕಿಸ್ತಾನ ಎಂದು ಕರೆಯುವಂತಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್ ‘ಸು ಮೋಟೊ’ (ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿತ್ತು. ನ್ಯಾಯಮೂರ್ತಿ ಶ್ರೀಶಾನಂದ ವಿರುದ್ಧದ ‘ಸುಮೋಟೊ’ ಪ್ರಕರಣದ ವಿಚಾರಣೆಯಲ್ಲಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿತ್ತು. ಇದೀಗ ನ್ಯಾಯಮೂರ್ತಿ ಶ್ರೀಶಾನ೦ದ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ವು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ಅಂತೆಯೇ ಈ ವೇಳೆ “ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನಲು ಸಾಧ್ಯವಿಲ್ಲ. ಭಾರತದ ಯಾವುದೇ ಭಾಗವನ್ನು ಯಾರೂ ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಆ ರೀತಿ ಕರೆಯುವುದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ಆದರೆ ಕೋರ್ಟ್, ಈ ಕುರಿತು ಸಾಮಾಜಿಕ ಮಾಧ್ಯಮದ ಲೈವ್ ಫೀಡಿಂಗ್‌ನಲ್ಲಿ ಬಂದಿರುವ ಕಾಮೆಂಟ್‌ಗಳನ್ನು ತಡೆಯಲು ನಿರಾಕರಿಸಿತು. ನ್ಯಾಯಾಂಗದ ಘನತೆಯ ಹಿತದೃಷ್ಟಿಯಿಂದ ನಾವು ಈ ಕುರಿತ ಪ್ರಕ್ರಿಯೆಗಳನ್ನು ಮುಂದುವರಿಸದಂತೆ ಕೈಬಿಡುತ್ತಿದ್ದೇವೆ ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.