ಚಿಕ್ಕಮಗಳೂರು: ಮೋದಿ ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಎಂದು ಚುನಾವಣಾ ಬಾಂಡ್ ತಂದ್ರು. ಪಾರದರ್ಶಕ ವ್ಯವಸ್ಥೆ ತಪ್ಪೋ… ಕದ್ದು ಸೂಟ್ಕೇಸ್ ತೆಗೆದೊಳ್ತಿದ್ದದ್ದು ತಪ್ಪೋ. ಕಾಂಗ್ರೆಸ್ ಕದ್ದು ಸೂಟ್‌ಕೇಸ್ ತೆಗೆದುಕೊಳ್ತಿರೋದು ಸರಿ, ಪಾರದರ್ಶಕತೆ ತಪ್ಪು ಅಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮೇಲೆ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ಬಾಂಡ್ ವೈಯಕ್ತಿಕವಲ್ಲ, ಪಾರ್ಲಿಮೆಂಟ್‌ನಲ್ಲಿ ಪಾಸ್ ಮಾಡಿ, ಆಯೋಗದ ಗಮನಕ್ಕೂ ಬಂದಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಕದ್ದು ಯಾರಿಗೆ, ಯಾರು, ಎಷ್ಟು ಅನ್ನೋದು ಗೊತ್ತಾಗಬಾರದು ಅನ್ನೋದು ಕಾಂಗ್ರೆಸ್ ಉದ್ದೇಶ. ಇಂದು ಕಾಂಗ್ರೆಸ್ ಅಕ್ರಮಕ್ಕೆ ಪ್ರೋತ್ಸಾಹ ಕೊಡುವ ಮಾತನ್ನ ಆಡುತ್ತಿದೆ ಎಂದರು.
ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಿದ್ದು, ಆಯಾ ಪಕ್ಷಗಳ ಸಾಮರ್ಥ್ಯ, ಬೆಂಬಲ, ಹಿತೈಷಿಗಳ ಅನುಗುಣವಾಗಿ ಚುನಾವಣಾ ಬಾಂಡ್ ಸಿಕ್ಕಿದೆ. ಕಾಂಗ್ರೆಸ್‌ಗೆ ಚುನಾವಣಾ ಬಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ಳುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾರದರ್ಶಕ, ಪ್ರಾಮಾಣಿಕತೆ ಹುಟ್ಟು ಹಾಕಿದವರ ಮೇಲೆ ಕೇಸ್ ದಾಖಲಿಸಿದೆ. ತೊಂದರೆ ಇಲ್ಲ, ಇವೆಲ್ಲವನ್ನೂ ನಾವು ಎದುರಿಸುತ್ತೇವೆ. ಮುಡಾ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡಬಾರದು. ಮುಡಾ ವ್ಯಕ್ತಿಗತ ಸ್ವಾರ್ಥದಿಂದ, ಡಿನೋಟಿಫೈ, ಕನ್ವರ್ಷನ್‌ನಿಂದ ನಿವೇಶನ ಪಡೆಯೋವರೆಗೂ ಸ್ವಹಿತಾಸಕ್ತಿ ಇದೆ ಎಂದು ಕಿಡಿಕಾರಿದರು.