ಬಳ್ಳಾರಿ: ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ಹಣ ವರ್ಗಾವಣೆಯ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿಗೆ ಈವರೆಗೆ ಇದ್ದ ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ನಿಷೇಧವನ್ನು ಸುಪ್ರೀಂಕೋರ್ಟ್ ಇಂದು ತೆರವುಗೊಳಿಸಿದೆ. ಈ ಮೂಲಕ ವನವಾಸ ಅಂತ್ಯಗೊಂಡಿದೆ. ಇದರಿಂದ ಇನ್ನು ಮುಂದೆ ಬಳ್ಳಾರಿ ಜಿಲ್ಲೆಯ ರಾಜಕಾರಣ ರಂಗೇರಲಿದೆ. ಅಕ್ರಮ ಗಣಿಗಾರಿಕೆಯ ಆರೋಪದಿಂದ ಸಿಬಿಐ 2011ರ ಸೆಪ್ಟೆಂಬರ್ 5 ರಂದು ಬಂಧನ ಮಾಡಿ ಹೈದ್ರಬಾದಿನ ಚಂಚಲಗೂಡ್ ಜೈಲಿನಲ್ಲಿ ಇರಿಸಿತ್ತು. ಸುಪ್ರೀಂ ಕೋರ್ಟ್ ತಮ್ಮ ಪ್ರಭಾವ ಹೊಂದಿರುವ ಬಳ್ಳಾರಿ, ಅನಂತಪುರಂ ಮತ್ತು ಕರ್ನೂಲ್ ಜಿಲ್ಲೆಗಳಿಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಿತ್ತು. ಅದಕ್ಕಾಗಿ ಈ ಹಿಂದಿನ 2019ರ ಚುನಾವಣೆಯನ್ನು ಜಿಲ್ಲೆಯ ಹೊರಗಿನಿಂದ ಇದ್ದು ಸ್ನೇಹಿತ ಶ್ರೀರಾಮುಲು ಜೊತೆ ಎದುರಿಸಿದ್ದರು. ಹಲವು ಬಾರಿ ಅನುಮತಿ ಪಡೆದು ಕೆಲ ದಿನ ಬಂದು ಹೋದರು. ಜೈಲಿನಿಂದ ಹೊರಗಡೆ ಇರಲು ಅನುಮತಿ ನೀಡಿತು. ಆದರೂ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಇತ್ತು. ಅದಕ್ಕಾಗಿ ಅವರು ಗಂಗಾವತಿಯಿಂದ ಸ್ಪರ್ಧೆ ಮಾಡಿ ಶಾಸಕರಾಗಿದ್ದಾರೆ. ಬಳ್ಳಾರಿ ನನ್ನ ತವರು, ಜನ್ಮ ಭೂಮಿ ಇಂದಲ್ಲ ನಾಳೆ ಬರುತ್ತೇನೆ ಬಳ್ಳಾರಿಯ ಅಭಿವೃದ್ಧಿಯೇ ನನ್ನ ಕನಸು ಎಂದು ತಮ್ಮಪತ್ನಿಯನ್ನು ಕಳೆದ ಚುನಾವಣೆಯಲ್ಲಿ ಇಲ್ಲಿ ಕಣಕ್ಕಿಳಿಸಿದ್ದರು. ಈಗ ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ದೊರೆತಿದ್ದರಿಂದ ಪ್ರಬಲವಾಗಿರುವ ಕಾಂಗ್ರೆಸ್‌ಅನ್ನು ಸಮರ್ಥವಾಗಿ ಎದುರಿಸಲು ರೆಡ್ಡಿ ರೆಡಿಯಾಗುವುದಂತು ಸತ್ಯ. ಗುರುವಾರ ಬರ್ತಾರಂತೆ: ಬಳ್ಳಾರಿಗೆ ಬರಲು ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಇದ್ದ ನಿರ್ಬಂಧ ತೆರವಾಗಿದ್ದು. ಅವರು ಗುರುವಾರ ಅಕ್ಟೋಬರ್ 3ರಂದು ತವರು ಬಳ್ಳಾರಿಗೆ ಬರಲಿದ್ದಾರಂತೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಅವರ ಬೆಂಬಲಿಗರ ಬಳಗ ಸಿದ್ಧತೆ ಮಾಡಿಕೊಳ್ಳಲಿದೆಯಂತೆ.