ಮಧ್ಯಪ್ರದೇಶ: ಇಂದೋರ್ನ ಲೋಧಿಯಾ ಕುಂಡ್ ಜಲಪಾತಕ್ಕೆ ಕಾರು ಬಿದ್ದ ಪರಿಣಾಮ ತಂದೆ ಮತ್ತು ಮಗಳನ್ನು ಪ್ರವಾಸಿಗರು ರಕ್ಷಿಸಿದ ಈ ಘಟನೆ ನಡೆದಿದೆ.
ಇಂದೋರ್ ನಗರದಿಂದ 60 ಕಿಲೋಮೀಟರ್ ದೂರದಲ್ಲಿರುವ ಸಿಮ್ರೋಲ್ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಲಪಾತದ ಅಂಚಿನಲ್ಲಿದ್ದ ಕಾರು ನಿಲ್ಲಲು ಸಾಧ್ಯವಾಗದೆ ಜಲಪಾತಕ್ಕೆ ಬಿದ್ದಿದೆ. ಈ ಸಂದರ್ಭ ತಂದೆ ಮಗಳು ಕಾರಿನಲ್ಲಿದ್ದು, ತಂದೆ ಕಾರಿನಿಂದ ಎಸೆಯಲ್ಪಟ್ಟರೆ, ಮಗಳು ಕಾರಿನಲ್ಲೇ ಇದ್ದರು. ಚಿಕ್ಕ ಹುಡುಗಿಯ ಕಿರುಚಾಟ ಕೇಳಿ ಜಲಪಾತದ ಸಮೀಪವಿರುವ ಪ್ರವಾಸಿಯೊಬ್ಬರು ನೀರಿಗೆ ಹಾರಿ ವ್ಯಕ್ತಿಯನ್ನು ರಕ್ಷಿಸಿದರೆ, ಕಾರಿನಲ್ಲಿದ್ದ ಮಗುವನ್ನು ಅಕ್ಕ ಪಕ್ಕದ ಪ್ರವಾಸಿಗರು ರಕ್ಷಿಸಿದ್ದಾರೆ.
“ಕಾರು ಜಲಪಾತಕ್ಕೆ ಬೀಳುತ್ತಿರುವುದನ್ನು ನಾನು ನೋಡಿದೆ. ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಮತ್ತು ಅವರ 13 ವರ್ಷದ ಮಗಳು, ವಾಹನ ಜಾರುತ್ತಿದ್ದರೂ ಇಳಿಯಲು ಪ್ರಯತ್ನಿಸುತ್ತಿದ್ದರು. ಆದರೆ, ಕಾರು ಬಿದ್ದಿದೆ. ಇಬ್ಬರು ಒಳಗಿದ್ದರು” ಎಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಸುಮಿತ್ ಮ್ಯಾಥ್ಯೂ (26) ಪಿಟಿಐಗೆ ತಿಳಿಸಿದ್ದಾರೆ.
“ಅವರು ನೀರಿನಲ್ಲಿ ಮುಳುಗುತ್ತಿದ್ದರು. ನಾನು ಹಾರಿ ಕಾರಿನೊಳಗಿದ್ದ ವ್ಯಕ್ತಿಯನ್ನು ರಕ್ಷಿಸಿದೆ. ಅವರ ಮಗಳನ್ನು ಸುತ್ತಮುತ್ತಲಿನವರು ಉಳಿಸಿದ್ದಾರೆ. ಘಟನೆಯನ್ನು ನೋಡಿ ಸ್ವಲ್ಪ ಸಮಯದವರೆಗೆ ನಾನು ಆಘಾತಕ್ಕೊಳಗಾಗಿದ್ದೆ ಆದರೆ ನಂತರ ಧೈರ್ಯವನ್ನು ಸಂಗ್ರಹಿಸಿದೆ” ಎಂದು ಅವರು ಹೇಳಿದರು. ತಂದೆ ಮತ್ತು ಮಗಳು ಇಬ್ಬರನ್ನೂ ರಕ್ಷಿಸಿರುವುದು ಸಂತಸ ತಂದಿದೆ ಎಂದು ಮ್ಯಾಥ್ಯೂ ಹೇಳಿದ್ದಾರೆ. ಏತನ್ಮಧ್ಯೆ, ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಮೆಹ್ತಾ ಹೇಳಿದ್ದಾರೆ.
“ಕಾರನ್ನು ಜಲಪಾತದ ಕೊಳದ ಸಮೀಪದಲ್ಲಿ ನಿರ್ಲಕ್ಷ್ಯದಿಂದ ನಿಲ್ಲಿಸಲಾಗಿತ್ತು. ಅದರ ಟ್ರಂಕ್ ಅನ್ನು ಬಲವಾಗಿ ಮುಚ್ಚಿದ ನಂತರ ಕಾರು ಉರುಳಲು ಪ್ರಾರಂಭಿಸಿತು ಮತ್ತು ನಂತರ ಜಲಪಾತದ ಕೊಳಕ್ಕೆ ಬಿದ್ದಿದೆ ಎಂದು ನಾವು ತಿಳಿದುಕೊಂಡಿದ್ದೇವೆ” ಎಂದು ಎಸ್ಪಿ ಹೇಳಿದರು. ಈ ಪ್ರದೇಶವು ಮಾನ್ಸೂನ್ ಮತ್ತು ಭಾನುವಾರದ ಕಾರಣದಿಂದ ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಹೊಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
 
				 
         
         
         
															 
                     
                     
                    


































 
    
    
        