ಚೆನ್ನೈ : ಒಂದೆಡೆ ಬಣ್ಣದ ಜಗತ್ತಿನಲ್ಲಿ ಮದುವೆ ಸುದ್ದಿಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿಯೂ ಸಖತ್ ಸದ್ದು ಮಾಡುತ್ತಿದೆ. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿಯನ್ನೇ ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಅಲ್ಲದೆ, ಧನುಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್ ಸುದ್ದಿಯು ಸಹ ಅಭಿಮಾನಿಗಳಿಗೆ ಬರಸಿಡಿಲನಂತೆ ಅಪ್ಪಳಿಸಿತು. ಇದರ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ತಮ್ಮ ಪತ್ನಿಯಿಂದ ಬೇರ್ಪಡುತ್ತಿರುವುದಾಗಿ ಘೋಷಿಸಿದರು. ಸ್ಯಾಂಡಲ್ವುಡ್ನಲ್ಲಿ ಬಿಗ್ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ. ಡಾ. ರಾಜ್ ಕುಟುಂಬದ ಯುವರಾಜ್ಕುಮಾರ್ ಮತ್ತು ಶ್ರೀದೇವಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿಗಳು ಇನ್ನು ಚರ್ಚೆಯಲ್ಲಿರುವಾಗಲೇ ಮತ್ತೊಂದು ತಾರಾ ಜೋಡಿ ಕೂಡ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸ್ಫೋಟಕ ಸುದ್ದಿ ಇದೀಗ ಹೊರಬಿದ್ದಿದೆ. ತಮಿಳು ಸಿನಿಮಾ ರಂಗದ ಸ್ಟಾರ್ ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ವೈರಲ್ ಆಗಿವೆ. ಇತ್ತೀಚೆಗಷ್ಟೇ ರವಿ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಪತ್ನಿಯ ಫೋಟೋಗಳು ಮತ್ತು ಫ್ಯಾಮಿಲಿ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಇದಲ್ಲದೆ, ಆರತಿ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಕೆಲವು ಫೋಟೋಗಳನ್ನು ಸಹ ಅಳಿಸಿದ್ದಾರೆ. ಈ ಒಂದು ಕಾರಣದಿಂದ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
