ನವದೆಹಲಿ: ಭಾರತದ ಸ್ಟಾರ್ ಜಾವೆಲಿನ್ ಕ್ರೀಡಾಪಟು, ಟೋಕಿಯೊ ಒಲಿಂಪಿಕ್ಸ್‌ನ ಬಂಗಾರದ ಪದಕ ವಿಜೇತ ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ.
ಲೌಸನ್ನೆ ಡೈಮಂಡ್ ಲೀಗ್ನಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದು ಸತತ ಎರಡನೇ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ 2023 ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬಳಿಕ ನೀರಜ್ ಗಾಯದ ಸಮಸ್ಯೆಯಿಂದ ಕೆಲವು ಸ್ಪರ್ಧೆಗಳಿಂದ ಹೊರಗುಳಿದಿದ್ದರು.
ನೀರಜ್ ತನ್ನ ಸುತ್ತನ್ನು ಫೌಲ್‌ನೊಂದಿಗೆ ಪ್ರಾರಂಭಿಸಿದರು. ೨ನೇ ಸುತ್ತಿನಲ್ಲಿ 83.52 ಮೀಟರ್ ದೂರ ಎಸೆದ ನೀರಜ್, ೩ನೇ ಸುತ್ತಿನಲ್ಲಿ 85.02 ಮೀಟರ್ ದೂರ ಎಸೆದರು. ಆ ಬಳಿಕ ನಾಲ್ಕನೇ ಸುತ್ತಿನಲ್ಲಿ ನೀರಜ್ ಮತ್ತೊಮ್ಮೆ ಫೌಲ್ ಮಾಡಿದರು.ಆದರೆ ಐದನೇ ಸುತ್ತಿನಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್, ಈ ಎಸೆತದೊಂದಿಗೆ ಮೊದಲ ಸ್ಥಾನಕ್ಕೆ ಬಂದರು. ಆರನೇ ಮತ್ತು ಕೊನೆಯ ಸುತ್ತಿನಲ್ಲಿ ನೀರಜ್ 84.15 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು.