ಚೆನ್ನೈ: ಶಿಕ್ಷಣದ ವಿಷಯವನ್ನು ಮರಳಿ ರಾಜ್ಯ ಪಟ್ಟಿಗೆ ಸೇರಿಸಬೇಕು. ಇದರಿಂದ ನೀಟ್ ಅಥವಾ ಇನ್ನಿತರ ಅರ್ಹತಾ ಪರೀಕ್ಷೆಗಳಿಗೆ ಅಂತ್ಯ ಹಾಡಲು ಸಾಧ್ಯ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ಪೋರ್ಟ್ ಸೇಂಟ್ ಜಾರ್ಜ್‌ನಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರವನ್ನು ರಾಜ್ಯ ಪಟ್ಟಿಗೆ ಸೇರಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ವೈದ್ಯನಾಗಬೇಕೆಂಬ ಗುರಿ ಹೊಂದಿದ್ದ ತಮಿಳುನಾಡಿನ 19 ವರ್ಷದ ವಿದ್ಯಾರ್ಥಿಯೊಬ್ಬರು, ನೀಟ್‌ನಲ್ಲಿ ಎರಡನೇ ಬಾರಿಯೂ ಅನುತ್ತೀರ್ಣವಾಗಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಕೆಲ ದಿನಗಳ ನಂತರ ಮಗನ ಶೋಕದಲ್ಲಿ ನೊಂದು ತಂದೆಯೂ ಆತ್ಮಹತ್ಯೆಗೆ ಶರಣಾದರು. ಹೀಗಾಗಿ ನೀಟ್ ಪರೀಕ್ಷೆಯ ಅಗತ್ಯತೆಗಳ ಬಗ್ಗೆ ತಮಿಳುನಾಡಿನಲ್ಲಿ ಅಪಸ್ವರ ಎದ್ದಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.