ಕೊಡಗು: ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಶವ ಕೊಡಗು ಜಿಲ್ಲೆ ಹೈಸೂಡ್ಳೂರು ಗ್ರಾಮದ ಕೂಟಿಯಾಲ ಹೊಳೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಅಶ್ವಿನಿ(48), ನಿಕಿತಾ(21) ಮತ್ತು ನವ್ಯ(18) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಅಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇವಾ ಪ್ರತಿನಿಧಿಯಾಗಿದ್ದರು. ನಿಕಿತಾ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಸಹೋದರಿ ನವ್ಯ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಈ ಮೂವರ ಮೃತದೇಹ ಕೂಟಿಯಾಲ ಹೊಳೆಯಲ್ಲಿ ಪತ್ತೆಯಾಗಿದೆ.
ಅಶ್ವಿನಿ ಇಬ್ಬರು ಮಕ್ಕಳೊಂದಿಗೆ ಹುದಿಕೇರಿಯಲ್ಲಿ ವಾಸವಿದ್ದರು. ಅಶ್ವಿನಿ ಪತಿ ಮಂಡ್ಯದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಅಶ್ವಿನಿ ಮತ್ತು ಮಕ್ಕಳು ಮನೆಯಿಂದ ತೆರಳಿದ್ದರು. ಆದರೆ ನಿನ್ನೆ ಸಂಜೆ ಹೊಳೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ಮೂವರ ಸಾವು ಆತ್ಮಹತ್ಯೆಯೋ, ಆಕಸ್ಮಿಕವೋ, ಕೊಲೆಯೋ ಎಂದು ತಿಳಿದು ಬಂದಿಲ್ಲ. ಈ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.