ದಂಡಬಡ್ಡಿ ವಿಧಿಸುವಂತಿಲ್ಲ: ಬ್ಯಾಂಕ್​ಗಳಿಗೆ ಆರ್​ಬಿಐ ನಿರ್ದೇಶನ; ಜನವರಿಯಿಂದ ಜಾರಿ

WhatsApp
Telegram
Facebook
Twitter
LinkedIn

ಮುಂಬೈ: ಬ್ಯಾಂಕ್​ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ಆದಾಯ ವೃದ್ಧಿಗೆ ದಂಡ ಬಡ್ಡಿ (ಪೀನಲ್ ಇಂಟರೆಸ್ಟ್) ಹೇರಿಕೆಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ದಂಡ ಬಡ್ಡಿಯನ್ನು ನಿಷೇಧಿಸಿದೆ.

ಸಾಲ ಮರುಪಾವತಿಗೆ ವಿಫಲರಾದರೆ ದಂಡ ಬಡ್ಡಿಗೆ ಬದಲಾಗಿ ತರ್ಕಬದ್ಧವಾದ ದಂಡ ಶುಲ್ಕವನ್ನು ಮಾತ್ರ ಹೇರಬಹುದು. ದಂಡ ಬಡ್ಡಿ ಹೇರಿಕೆ ಮೇಲಿನ ನಿಷೇಧ 2024ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಆರ್​ಬಿಐ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಸಾಲದ ಒಪ್ಪಂದವನ್ನು ಪಾಲಿಸದ ಸಾಲಗಾರರಿಗೆ ಒಂದು ವೇಳೆ ದಂಡ ವಿಧಿಸಿದರೆ ಅದನ್ನು ದಂಡ ಶುಲ್ಕ ಎಂದು ಪರಿಗಣಿಸಬೇಕು. ಸಾಲದ ಬಡ್ಡಿಗೆ ಸೇರಿಸುವ ದಂಡವನ್ನು ಬಡ್ಡಿ ರೂಪದಲ್ಲಿ ಹೇರಬಾರದು ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟ ಸೂಚನೆ ನೀಡಿದೆ.

ಸಾಲ ಮರುಪಾವತಿ ಮಾಡಲು ವಿಫಲರಾದವರಿಗೆ ವಿಧಿಸುವ ದಂಡ ಶುಲ್ಕ ಕೂಡ ತರ್ಕಬದ್ಧವಾಗಿರಬೇಕು. ಇದು ನಿಯಮ ಪಾಲನೆ ವೈಫಲ್ಯದ ಪ್ರಮಾಣ ಆಧರಿಸಿರಬೇಕು. ಯಾವುದೇ ತಾರತಮ್ಯ ಮಾಡಬಾರದು. ದಂಡ ಶುಲ್ಕಗಳ ಮೇಲೆ ಮತ್ತೆ ಬಡ್ಡಿಯನ್ನು ಲೆಕ್ಕ ಹಾಕಬಾರದು ಎಂದೂ ಸೂಚಿಸಿದೆ.

ಯಾವುದಕ್ಕೆ ಅನ್ವಯಿಸದು?: ಈ ಸೂಚನೆಗಳು ಕ್ರೆಡಿಟ್ ಕಾರ್ಡ್​ಗಳು, ಬಾಹ್ಯವಾಣಿಜ್ಯ ಸಾಲಗಳು, ಟ್ರೇಡ್ ಕ್ರೆಡಿಟ್​ಗಳಿಗೆ ಅನ್ವಯವಾಗುವುದಿಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ನಿಗದಿತ ದರದ ಆಯ್ಕೆ: ಸಮಾನ ಮಾಸಿಕ ಕಂತು (ಇಎಂಐ) ಮೂಲಕ ಸಾಲ ಮರುಪಾವತಿ ಮಾಡುವ ವೈಯಕ್ತಿಕ ಸಾಲಗಾರರಿಗೆ ನಿಗದಿತ (ಫಿಕ್ಸೆಡ್) ಬಡ್ಡಿ ದರ ವ್ಯವಸ್ಥೆ ಅಥವಾ ಸಾಲದ ಅವಧಿ ವಿಸ್ತರಿಸುವ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿದೆ. ಬಡ್ಡಿ ದರದ ಏರಿಕೆ ಸಂದರ್ಭದಲ್ಲಿ ಸಾಲಗಾರರು ಋಣಾತ್ಮಕ (ನೆಗೆಟಿವ್) ಅಮಾರ್ಟೆಸೇಶನ್ ಜಾಲಕ್ಕೆ ಬೀಳುವುದನ್ನು ತಪ್ಪಿಸುವುದು ಈ ಕ್ರಮದ ಉದ್ದೇಶವಾಗಿದೆ.

ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಲು ಆರಂಭಿಸಿದ ನಂತರ 2022ರ ಮೇ ತಿಂಗಳಿಂದ ಬಡ್ಡಿ ದರ ಏರುಮುಖವಾಗಿದೆ.

250 ಮೂಲ ಪಾಯಿಂಟ್ ಏರಿಕೆ: ರೆಪೋ ದರದಲ್ಲಿ 250 ಮೂಲ ಪಾಯಿಂಟ್ ಏರಿಕೆಯ ಫಲವಾಗಿ ಬಹಳಷ್ಟು ಸಾಲಗಾರರು ನೆಗೆಟಿವ್ ಅಮಾರ್ಟೆಸೇಶನ್ ಸ್ಥಿತಿ ಎದುರಿಸಿದ್ದರು. ಇಎಂಐ, ನಿಗದಿತ ಬಡ್ಡಿಗಿಂತ ಕಡಿಮೆಯಾಗಿದ್ದರಿಂದ ಅಸಲು ಮೊತ್ತದಲ್ಲಿ ಸತತ ಏರಿಕೆಯಾಗಿತ್ತು. ಇಎಂಐ-ಆಧಾರಿತ ಫ್ಲೋಟಿಂಗ್ ದರದ ವೈಯಕ್ತಿಕ ಸಾಲಗಳನ್ನು ಮಂಜೂರು ಮಾಡುವ ವೇಳೆ ಬ್ಯಾಂಕ್​ಗಳು ಮತ್ತು ಎನ್​ಬಿಎಫ್​ಸಿಗಳು ಸಾಲಗಾರರ ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸಬೇಕು ಎಂದು ಆರ್​ಬಿಐ ಹೇಳಿದೆ. ಗೃಹ, ಆಟೋ ಮತ್ತಿತರ ವೈಯಕ್ತಿಕ ಸಾಲಗಳು ರೆಪೋ ದರದಂತೆ ಬಾಹ್ಯ ಬೆಂಚ್​ವಾರ್ಕ್ ದರಗಳಿಗೆ ಲಿಂಕ್ ಆಗಿರುತ್ತವೆ.

ಮಧ್ಯಮ ವರ್ಗದ ಆದಾಯ 10 ವರ್ಷದಲ್ಲಿ 3 ಪಟ್ಟು ಏರಿಕೆ

ನವದೆಹಲಿ: ದೇಶದ ಮಧ್ಯಮ ವರ್ಗದ ಜನರ ಆದಾಯ ಕಳೆದ ಹತ್ತು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಾಗಿದೆ…! 2012-13ರಿಂದ 2022-23ರ ನಡುವೆ ಆದಾಯ 4.4 ಲಕ್ಷ ದಿಂದ 13 ಲಕ್ಷ ರೂಪಾಯಿಗೆ ಏರಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಸಂಶೋಧನಾ ವರದಿಯೊಂದು ಹೇಳಿದೆ. ಕಡಿಮೆ ಆದಾಯದ ಗುಂಪುಗಳು ಹೆಚ್ಚು ಆದಾಯದ ಗುಂಪಾಗಿ ಪರಿವರ್ತನೆಗೊಂಡಿದ್ದು ಹಾಗೂ ಹಿಂದೆ ಆದಾಯವನ್ನು ದಾಖಲಿಸದಿದ್ದವರು ಈಗ ತೆರಿಗೆ ವಿವರಗಳನ್ನು (ಐಟಿಆರ್) ಸಲ್ಲಿಸುವ ಪ್ರಮಾಣದಲ್ಲೂ ಹೆಚ್ಚಳವಾಗಿದೆ ಎಂದು ಎಸ್​ಬಿಐ ವರದಿ ಹೇಳಿದೆ.

2011-12ರಲ್ಲಿ ತೆರಿಗೆ ವಿವರ ಸಲ್ಲಿಸಿದ 1.6 ಕೋಟಿ ವ್ಯಕ್ತಿಗಳ ಪೈಕಿ 5 ಲಕ್ಷ ಆದಾಯ ಹೊಂದಿರುವವರ ಪ್ರಮಾಣ ಶೇ.84 ಆಗಿತ್ತು. ಆದರೆ, 2022-23ರಲ್ಲಿ ತೆರಿಗೆ ವಿವರ ಸಲ್ಲಿಸಿದ ಸಂಖ್ಯೆ 6.85 ಕೋಟಿ ಆಗಿದ್ದು, ಈ ಪೈಕಿ ಶೇ.64 ಜನರು ಮಾತ್ರ 5 ಲಕ್ಷ ರೂ. ಆದಾಯದ ಗುಂಪಿನಲ್ಲಿದ್ದಾರೆ. ಶೇ.8.1ರಷ್ಟು ಜನರು 5-10 ಲಕ್ಷ ರೂ. ಆದಾಯದ ಗುಂಪಿನಲ್ಲಿದ್ದರೆ, ಶೇ.3.8 ಜನರು 10-20 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಶೇ.15ರಷ್ಟು ಜನರು 20-50 ಲಕ್ಷ ರೂ. ಗಳಿಕೆ ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ತಲಾ ಆದಾಯ ಪ್ರಸ್ತುತ 2 ಲಕ್ಷ ರೂ.ಗಳಿಂದ 2047ರ ವೇಳೆಗೆ 14.9 ಲಕ್ಷ ರೂಪಾಯಿಗೆ ಏರಲಿದೆ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಎಸ್​ಬಿಐ ಅಂದಾಜು ಮಾಡಿದೆ.

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon