ಶಿವಮೊಗ್ಗ: ಮತದಾನೋತ್ತರ ಸಮೀಕ್ಷೆಗಳ ಮೂಲಕ ಜನರ ಭಾವನೆಗಳು ಹೊರಬಿದ್ದಿದ್ದು, ಭಾರತೀಯರ ಹೃದಯ ಗೆದ್ದಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಇಂಡಿಯಾ ಮೈತ್ರಿಕೂಟದವರು ನಾಳೆ ಮಧ್ಯಾಹ್ನದವರೆಗೆ ತಾವೇ ಅಧಿಕಾರಕ್ಕೆ ಬರೋದು ಅಂತ ಹೇಳುತ್ತಾರೆ. ಫಲಿತಾಂಶಗಳು ಹೊರಬಿದ್ದ ಮೇಲೆ ಈವಿಎಂಗಳ ಟ್ಯಾಂಪರಿಂಗ್ ನಡೆದಿದೆ, ನರೇಂದ್ರ ಮೋದಿಯವರು ಪುನಃ ಪ್ರಧಾನಮಂತ್ರಿಯಾಗುತ್ತಿರುವುದು ಆಕಸ್ಮಿಕವೆಂದು ಹೇಳುತ್ತಾರೆ. ಲೋಕಸಭಾ ಚುನಾವಣೆ ಫಲಿತಾಂಶಗಳ ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಹಿಂದಿನ ದಿನ ಫೇಕ್ ವಿಡಿಯೋಗಳನ್ನ ರಿಲೀಸ್ ಮಾಡಿ ತಮ್ಮ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಕ್ಕೆ, ತನ್ನ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಲಾಗಿದೆಯೆಂದು ಬರೆದಿರುವ ಪತ್ರ ಸಿಕ್ಕಿದೆ. ಆದರೆ ಕೇಂದ್ರ ಆಯೋಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಒಂದು ವೇಳೆ ಕೇಂದ್ರ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳದಿದ್ದರೆ ತಾವು ಕೋರ್ಟ್ ಮೆಟ್ಟಿಲೇರುವುದಾಗಿ ಅವರು ತಿಳಿಸಿದರು