ಮುಂಬೈ: 2018ರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‌ಗೆ ನಾಗ್ಪುರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಹಾಗೂ 30,000 ರೂ. ದಂಡ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಿಶಾಂತ್ ಅಗರ್ವಾಲ್‌ನನ್ನು ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ನಿಶಾಂತ್ ಅಗರ್ವಾಲ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) ಮತ್ತು ಅಧಿಕೃತ ರಹಸ್ಯ ಕಾಯ್ದೆಯ (ಒಎಸ್‌ಎ) ವಿವಿಧ ಸೆಕ್ಷನ್‌ಗಳು ಹಾಗೂ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 235ರ ಅಡಿಯಲ್ಲಿ ಅಗರ್ವಾಲ್‌ನನ್ನು ದೋಷಿ ಎಂದು ಪರಿಗಣಿಸಿ ನ್ಯಾಯಾಧೀಶ ಎಂ.ವಿ.ದೇಶಪಾಂಡೆ ಅವರಿದ್ದ ಪೀಠ ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಿಶಾಂತ್ ಅಗರ್ವಾಲ್ ಅವರು ನಾಗ್ಪುರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್‌ನ ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ೪ ವರ್ಷಗಳ ಕಾಲ ಹಿರಿಯ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಆತನ ವಿರುದ್ಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ನ (ಐಎಸ್‌ಐ) ತಾಂತ್ರಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಆತನನ್ನು ಅಕ್ಟೋಬರ್ 2018 ರಲ್ಲಿ ಮಿಲಿಟರಿ ಗುಪ್ತಚರ ಮತ್ತು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಗಳು (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದವು.