ಚಿಕ್ಕಮಗಳೂರು: ಪಿತೃ ಪಕ್ಷದ ಪ್ರಯುಕ್ತ ಮಾವನ ಮನೆಗೆ ಊಟಕ್ಕೆ ಹೋಗಲು ವ್ಯಕ್ತಿಯೊಬ್ಬ 112ಗೆ ಕರೆ ಮಾಡಿ ಪೊಲೀಸ್ ಜೀಪ್ ಕರೆಸಿಕೊಂಡ ಪ್ರಸಂಗ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಪಟ್ಟಣದಲ್ಲಿ ನಡೆದಿದೆ. ತುರ್ತು ಸಂಖ್ಯೆ 112 ಗೆ ಕರೆ ಮಾಡಿರುವ ತಾಲೂಕಿನ ತರುವೆ ಗ್ರಾಮದ ಅಶೋಕ್ ಎಂಬ ಪುಣ್ಯಾತ್ಮ ಸರ್ ಗಲಾಟೆ ಆಗ್ತಾ ಇದೆ ಬೇಗ ಬನ್ನಿ ಎಂದು ಮನವಿ ಮಾಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರಿಗೆ ಗಲಾಟೆ ಏನು ಇಲ್ಲ ಸರ್ ಮಾವನ ಮನೆಗೆ ಪಿತೃ ಪಕ್ಷಕ್ಕೆ ಊಟಕ್ಕೆ ಹೋಗ್ಬೇಕು ಕತ್ತಲೆ ಆಗಿದೆ ಗಾಡಿ ಯಾವುದು ಇಲ್ಲ ಮಳೆ ಬೇರೆ ಬರ್ತಾ ಇದೇ ಫಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ದಾನೆ. ಈ ಪುಣ್ಯಾತ್ಮನ ಕುಚೇಷ್ಟೆ ನೋಡಿ ಪೊಲೀಸರು ಒಂದು ಕ್ಷಣ ಬೈಯ್ಯಬೇಕೋ ನಗಬೇಕೋ ಎಂದು ತಿಳಿಯದೇ ಆತನಿಗೆ ಬುದ್ದಿವಾದ ಹೇಳಿ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಲಾರಿ ಅಡ್ಡ ಹಾಕಿ ಅಶೋಕ್ ನನ್ನು ಮಾವನ ಮನೆಗೆ ಕಳಿಸಿದ್ದಾರೆ.
